ನಿರ್ಮಾಪಕ ಗುನೀತ್ ಮೊಂಗಾ ಮತ್ತು ಶೌನಕ್ ಸೇನ್ ಅವರ ನಂತರ ಆರ್‌ಆರ್‌ಆರ್ ಸಿನಿಮಾ ಸ್ಟಾರ್ ರಾಮ್ ಚರಣ್ ಮಾರ್ಚ್ 12ರಂದು ನಡೆಯಲಿರುವ 95ನೇ ಅಕಾಡೆಮಿ ಪ್ರಶಸ್ತಿ ಸಲುವಾಗಿ ಯನೈಟೆಡ್ ಸ್ಟೇಟ್ಸ್ (ಯುಎಸ್)ಗೆ ತೆರಳಿದ್ದಾರೆ. ಇಂದು ರಾಮ್ ಚರಣ್ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬರಿಗಾಲಲ್ಲೇ ನಡೆದಾಡಿದ ದೃಶ್ಯಗಳು ದೊರೆತಿವೆ.
ಈ ವರ್ಷದ ಆರಂಭದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಆರ್‌ಆರ್‌ಆರ್ ಚಿತ್ರತಂಡದ ಕಣ್ಣು ಇದೀಗ ಆಸ್ಕರ್ ಮೇಲಿದೆ. ಪ್ರತಿಷ್ಟಿತ ಪ್ರಶಸ್ತಿ ಸಲುವಾಗಿ ರಾಮ್ಚರಣ್ ಅಮೆರಿಕಕ್ಕೆ ಪ್ರಯಾಣಿಸಿದ್ದು, ಫೋಟೋಗ್ರಾಫರ್‌ಗಳು ದೃಶ್ಯ ಸೆರೆ ಹಿಡಿದಿದ್ದಾರೆ. ಲಭ್ಯವಾದ ಚಿತ್ರಗಳಲ್ಲಿ ರಾಮ್ ಚರಣ್ ವಿಮಾನ ನಿಲ್ದಾಣದಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುವುದನ್ನು ನೋಡಬಹುದು.
ವರದಿಗಳ ಪ್ರಕಾರ, ರಾಮ್ ಚರಣ್ ಅಯ್ಯಪ್ಪ ಮಾಲೆ ಧರಿಸಿದ್ದಾರೆ. ಹೀಗಾಗಿ ಅವರು ಕಪ್ಪು ಉಡುಗೆ ಮತ್ತು ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೆ ಮೊದಲು ಅಯ್ಯಪ್ಪ ಭಕ್ತರು ಅನುಸರಿಸುವ ಕಡ್ಡಾಯ ಆಚರಣೆ ಇದು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅವರ ವಿಡಿಯೋಗಳಿಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಮೆಚ್ಚಿನ ನಟನನ್ನು ಹಾಡಿ ಹೊಗಳುತ್ತಿದ್ದಾರೆ. "ಆರ್‌ಆರ್‌ಆರ್ ತಂಡಕ್ಕೆ ಆಲ್ ದಿ ಬೆಸ್ಟ್. ಟ್ರೋಫಿ ಪಡೆಯಿರಿ" ಎಂದೆಲ್ಲಾ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
2009ರಲ್ಲಿ ಭಾರತ ಕೊನೆಯ ಬಾರಿಗೆ ಚಲನಚಿತ್ರದ ಸಂಗೀತಕ್ಕಾಗಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು. ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರು ಡ್ಯಾನಿ ಬೋಯ್ಲ್ ನಿರ್ದೇಶನದ ಸ್ಲಮ್‌ಡಾಗ್ ಮಿಲಿಯನೇರ್ (2008) ಚಿತ್ರದ ಜೈ ಹೋ ಹಾಡಿಗೆ ಅತ್ಯುತ್ತಮ ಮೂಲ ಹಾಡು ಪ್ರಶಸ್ತಿ ಪಡೆದಿದ್ದರು. ಇದೀಗ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಅಂಗಳದಲ್ಲಿದೆ.
ಇತ್ತೀಚೆಗೆ ಇದೇ ವಿಭಾಗದಲ್ಲಿ ನಾಟು ನಾಟು ಹಾಡು ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದಿದ್ದು, ಚಿತ್ರದ ಬಗ್ಗೆ ಎಲ್ಲರ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಅತ್ಯುತ್ತಮ ಮೂಲ ಗೀತೆಗೆ (ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ) ಜೊತೆಗೆ, ನಿರ್ಮಾಪಕ ಶೌನಕ್ ಸೇನ್ ಅವರ 'ಆಲ್ ದಟ್ ಬ್ರೀಥ್ಸ್' ಅತ್ಯುತ್ತಮ ಸಾಕ್ಷ್ಯ ಚಿತ್ರಕ್ಕೆ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಅವರ ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ (ಕಿರು ಚಿತ್ರಗಳು) ನಾಮನಿರ್ದೇಶನಗೊಂಡಿವೆ.
ಆಸ್ಕರ್ ಲಂಚ್ ಪಾರ್ಟಿ: ಇತ್ತೀಚೆಗೆ 95ನೇ ಆಸ್ಕರ್‌ಗೆ ನಾಮನಿರ್ದೇಶನಗೊಂಡಿರುವ 'ನಾಟು ನಾಟು' ಹಾಡಿನ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ, ನಿರ್ಮಾಪಕಿ ಗುನೀತ್ ಮೊಂಗಾ, ನಿರ್ಮಾಪಕ ಶೌನಕ್ ಸೇನ್ ಅವರು ದಿ ಅಕಾಡೆಮಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. 95ನೇ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಚಲನಚಿತ್ರ ತಾರೆಯರನ್ನು ಅಕಾಡೆಮಿ ಲಂಚ್ ಪಾರ್ಟಿಗೆ ಆಹ್ವಾನಿಸಿತ್ತು.
ಇದನ್ನೂ ಓದಿ: ಸಾವಿರ ಕೋಟಿ ಕ್ಲಬ್ ಸೇರಿದ 'ಪಠಾಣ್': ಟೀಕೆಗಳನ್ನು ಮೆಟ್ಟಿ ಸಾಧನೆ ಮಾಡಿದ ಹಿಂದಿ ಚಿತ್ರ!
ಆರ್‌ಆರ್‌ಆರ್ ಕಥೆ ಹೆಣೆದ ನಿರ್ದೇಶಕರ ಶೈಲಿ, ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೂವರು ಪ್ರತಿಭಾವಂತರಿಗೆ ಈಗಾಗಲೇ ಹಲವು ಗೌರವ, ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ವಿಶ್ವದ ಖ್ಯಾತ ಸಿನಿಮಾ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಅವರು ಕೂಡ ನಟ ರಾಮ್ ಚರಣ್ ಅವರನ್ನು ಮಚ್ಚಿಕೊಂಡಿದ್ದರು.
ಇದನ್ನೂ ಓದಿ: ಭರವಸೆಯ ನಟನಾಗಿ ಕಾಂತಾರ ಸ್ಟಾರ್: ಫಾಲ್ಕೆ ಪ್ರಶಸ್ತಿ 2023ರ ಸುಂದರ ಕ್ಷಣಗಳು