ಸಿನಿಮಾ ಪ್ರಪಂಚದಲ್ಲಿ ಯಾರು, ಯಾವಾಗ ಏನು ಬೇಕಾದರೂ ಆಗಬಹುದು ಅನ್ನೋದಿಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಆಫೀಸೊಂದರಲ್ಲಿ ವಾಚ್ಮ್ಯಾನ್ ಹಾಗೂ ಬಸ್ ಕಂಡಕ್ಟರ್ ಆಗಿದ್ದವರೂ ಸಿನಿಮಾ ಹೀರೋಗಳಾಗಿ ಸಕ್ಸಸ್ ಕಂಡಿರುವ ಜನರಿದ್ದಾರೆ. ಈ ಸಾಲಿನಲ್ಲಿ ಈಗ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾದ ಯುವ ನಿರ್ದೇಶಕ ಕೆ.ಕಿರಣ್ ರಾಜ್ ಕೂಡ ಒಬ್ಬರು.
777 ಚಾರ್ಲಿ ಎಂಬ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಗಮನ ಸೆಳೆಯುತ್ತಿರೋ ಕಿರಣ್ ರಾಜ್, ಸಿನಿಮಾ ಎಂಬ ಮಾಯಾಲೋಕಕ್ಕೆ ಬಂದ ಕುತೂಹಲಕಾರಿ ಕಥೆಯನ್ನು 777 ಚಾರ್ಲಿ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಹಂಚಿಕೊಂಡರು.
ಇವತ್ತು ಒಬ್ಬ ಹುಡುಗನ ಕಥೆ ಹೇಳ್ತೀನಿ ಅಂತಾ ಮಾತು ಶುರು ಮಾಡಿದ ರಕ್ಷಿತ್ ಶೆಟ್ಟಿ, ಚಿಕ್ಕವಯಸ್ಸಿನಲ್ಲೇ ಆ ಹುಡುಗನಿಗೆ ಓದು ಅಂತಾ ಮನೆಯವರು ಒತ್ತಡ ಹಾಕ್ತಾರೆ. ಆದರೆ, ಆ ಹುಡುಗನ ಮನೆಯಲ್ಲಿ ಎಲ್ಲರೂ ನೀನು ಟೀಚರ್ ಆಗಬೇಕು ಅಂತಾ ಬಲವಂತ ಮಾಡ್ತಾರೆ. ಆದರೆ, ಆ ಹುಡುಗನಿಗೆ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಠ ಇರುತ್ತೆ.
ಈ ಕಾರಣಕ್ಕೆ ಚಿಕ್ಕವಯಸ್ಸಿನಲ್ಲೇ ಮನೆ ಬಿಟ್ಟು ಬರ್ತಾನೆ. ಆಗ ಚಿಕ್ಕವಯಸ್ಸಿನಲ್ಲೇ ಆ ಹುಡುಗನಿಗೆ ಏನು ಮಾಡಬೇಕು ಅಂತಾ ಗೊತ್ತಾಗದೇ ಬಾರ್ವೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡ್ತಾನೆ. ನಿತ್ಯ ಬಾರ್ಗೆ ಕುಡಿಯೋದಕ್ಕೆ ಬರುವ ಗ್ರಾಹಕರಿಂದ ಹಾಗೂ ಅಲ್ಲಿಯ ಕೆಲಸದಾಳುಗಳಿಂದ ಅವಮಾನ, ಕಷ್ಟಗಳನ್ನ ಎದುರಿಸುತ್ತಾನೆ.
ಸಾಕಷ್ಟು ತೊಂದರೆಗಳನ್ನ ಅನುಭವಿಸಿದ ಆ ಹುಡುಗ, ಆ ಕೆಲಸ ಬಿಟ್ಟು ಒಂದು ಆಸ್ಪತ್ರೆಯಲ್ಲಿ ವಾಚ್ಮ್ಯಾನ್ ಆಗಿ ಕೆಲಸ ಮಾಡೋದಕ್ಕೆ ಸೇರಿಕೊಳ್ಳುತ್ತಾನೆ. ಆ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಂಬಂಧಿಕರ ಆ ಗೋಳಾಟ ನೋಡಿ ಸಾಕಷ್ಟು ಎಮೋಷನ್ಗೆ ಒಳಗಾಗುತ್ತಾನೆ. ಅದೇ ಆಸ್ಪತ್ರೆಯವರು ಮತ್ತೊಂದು ಮೆಡಿಕಲ್ ಕಾಲೇಜ್ಗೆ ಇವರನ್ನು ರಾತ್ರಿ ಹೊತ್ತು ಕೆಲಸ ಮಾಡೋದಕ್ಕೆ ಹಾಕ್ತಾರೆ.
ಆದರೆ, ಕಾಲೇಜು ಒಂದು ಕಾಡಿನ ಮಧ್ಯೆ ಇರುವ ಶವಗಳಿಂದ ಕೂಡಿರುತ್ತದೆ. ಇದರಿಂದ ಬೇಸತ್ತ ಆ ಹುಡುಗ ಆ ಕೆಲಸ ಬಿಟ್ಟು ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡ್ತಾರೆ. ಇಷ್ಟೆಲ್ಲ ಕಷ್ಟಪಟ್ಟು ಬೆಳೆದ ಹುಡುಗ ಇಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅದರ ಹೆಸರು 777 ಚಾರ್ಲಿ, ಅವರ ಹೆಸರು ಕಿರಣ್ರಾಜ್.
ಚಾರ್ಲಿ ಸಿನಿಮಾದ ನಿರ್ದೇಶಕ ಕಿರಣ್ರಾಜ್ ಅವರ ಜೀವನದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ ಮಾತು ಕೇಳಿ ಸಭಿಕರು ಕರತಾಡನ ಮಾಡಿದರು. ಮೊದಲಿನಿಂದಲೂ ಸಿನಿಮಾ ಬಗ್ಗೆ ವ್ಯಾಮೋಹ ಹೊಂದಿದ್ದ ಕಿರಣ್ ರಾಜ್ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
ಆ ಸಮಯದಲ್ಲೇ ಪರಿಚಯ ಆದವರು ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ. ರಿಕ್ಕಿ, ಕಿರಿಕ್ ಪಾರ್ಟಿ ಸಿನಿಮಾಗಳಲ್ಲಿ ಸಹಾಯ ನಿರ್ದೇಶಕಗಾಗಿ ಕೆಲಸ ಮಾಡಿದ ಕಿರಣ್ ರಾಜ್, ಇಂದು 777 ಚಾರ್ಲಿ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿದ್ದಾರೆ.
ಓದಿ: '777 ಚಾರ್ಲಿ' ಟ್ರೈಲರ್ ಬಿಡುಗಡೆ: ಸಿನೆಮಾ ಬಗ್ಗೆ ಸಿಂಪಲ್ ಸ್ಟಾರ್ ರಕ್ಷಿತ್ ಹೇಳಿದ್ದೇನು?