ರಾಜ್ಯದಲ್ಲಿ ಬೇಸಿಗೆ ಬಿಸಿಲ ತಾಪಕ್ಕಿಂತ ಚುನಾವಣಾ ಕಾವು ಹೆಚ್ಚಾಗಿದೆ. ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯೋಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಸ್ಟಾರ್ ನಟರು ಮತ ಬೇಟೆಗೆ ಇಳಿದಿದ್ದಾರೆ. ಅದೇ ರೀತಿ ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಚುನಾವಣಾ ಅಖಾಡದಲ್ಲಿರುವ ಕೆಲ ಸ್ನೇಹಿತರ ಪರ ಮತ ಯಾಚಿಸಲು ಸಜ್ಜಾಗಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 16 ದಿನಗಳು ಬಾಕಿ ಇವೆ. ಚುನಾವಣಾ ಕಣದಲ್ಲಿ ಇರುವ ಎಲ್ಲ ಪಕ್ಷದ ಅಭ್ಯರ್ಥಿಗಳು ಸುಡು ಬಿಸಿಲು ಲೆಕ್ಕಿಸದೇ ಮತ ಯಾಚಿಸುತ್ತಿದ್ದಾರೆ. ಮತದಾರರ ಮನಸ್ಸನ್ನು ಗೆಲ್ಲುವ ಸಲುವಾಗಿ ಅಭ್ಯರ್ಥಿಗಳು ಸ್ಟಾರ್ ನಟರ ಮೊರೆ ಹೋಗಿದ್ದು, ನಟ ನಟಿಯರನ್ನು ತಮ್ಮ ಕ್ಷೇತ್ರಕ್ಕೆ ಕರೆತರುತ್ತಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್, ಶೃತಿ ಅವರು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಪರ ಪ್ರಚಾರ ಮಾಡಿದ್ದಾರೆ. ಹಾಸ್ಯ ನಟ ಸಾಧುಕೋಕಿಲ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಚುನಾವಣಾ ಪ್ರಚಾರದ ಅಖಾಡದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಣಿಸೋದು ಪಕ್ಕಾ ಆಗಿದೆ.
ಸ್ಟಾರ್ ನಟರನ್ನು ಕರೆತಂದು ತಮ್ಮ ಪರ ಪ್ರಚಾರ ಮಾಡಿಸೋದು ಹೊಸದೇನಲ್ಲ. ಆದರೆ ಈ ಬಾರಿ ಹೆಚ್ಚು ಸ್ಟಾರ್ಗಳು ಚುನಾವಣಾ ಪ್ರಚಾರದಲ್ಲಿ ಕಾಣಿಸಿಲ್ಲ. ಬೆರಳೆಣಿಕೆ ಸಂಖ್ಯೆಯ ನಟ ನಟಿಯರು ತಮಗಿಷ್ಟದ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ. ಕೆಲವರು ನಮಗೆ ಪಕ್ಷ ಮುಖ್ಯ ಅಲ್ಲ, ನಮಗೆ ವ್ಯಕ್ತಿ ಮುಖ್ಯ ಅಂತ ಹೇಳಿ ಸ್ನೇಹಿತರ ಪರ ಪ್ರಚಾರ ಮಾಡ್ತಿದ್ದಾರೆ. ಅದಕ್ಕೆ ಸಾಕ್ಷಿ ಸುದೀಪ್. ನಾನು ಬಿಜೆಪಿ ಪರ ಪ್ರಚಾರ ಮಾಡಲ್ಲ, ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಅಂತಾ ಹೇಳಿ, ಅಖಾಡಕ್ಕೆ ಈಗಾಗಲೇ ಧುಮುಕಿದ್ದಾರೆ. ಸದ್ಯ ಸುದೀಪ್ ಸಾಲಿಗೆ ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಂಟ್ರಿ ಕೊಡಲಿದ್ದು, ಚುನಾವಣಾ ಅಖಾಡಲ್ಲಿ ಇರುವ ಕೆಲ ಸ್ನೇಹಿತರ ಪರ ಇದೇ 28ರಿಂದ ಪ್ರಚಾರ ಮಾಡಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಹಾಲಿವುಡ್ನಲ್ಲಿ ಅವಕಾಶ ಕೊಡಿಸುತ್ತೇವೆಂದು ಹೇಳಿ ನಟಿಗೆ ವಂಚನೆ ಆರೋಪ: ಇಬ್ಬರು ಅರೆಸ್ಟ್!
ಏಪ್ರಿಲ್ 28ರಿಂದ ಬಿಜೆಪಿ ಅಭ್ಯರ್ಥಿ ಸಚಿವ ಸುಧಾಕರ್ ಪರ ಚಿಕ್ಕಬಳ್ಳಾಪುರದಲ್ಲಿ ಪ್ರಚಾರ ಮಾಡೋದು ಬಹುತೇಕ ಖಚಿತ ಆಗಿದೆ. ಅಲ್ಲದೇ ಅರಕಲಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್, ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಪರ ಧ್ರುವ ಸರ್ಜಾ ಪ್ರಚಾರ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದಲ್ಲದೇ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ, ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ, ನಟ ನಿಖಿಲ್ ಕುಮಾರ್ ಪರವಾಗಿಯೂ ಧ್ರುವ ಸರ್ಜಾ ಮತ ಬೇಟೆಗಿಳಿಯೋ ಸಾಧ್ಯತೆ ಇದೆ. ಈಗಾಗಲೇ ಮಾತುಕತೆ ನಡೆದಿದ್ದು, ರಾಮನಗರದಲ್ಲಿ ಸ್ನೇಹಿತ ನಿಖಿಲ್ ಪರ ಮತಯಾಚಿಸೋದು ಬಹುತೇಕ ಕನ್ಫರ್ಮ್ ಆಗಿದೆ.
ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್: ಸಾಧಕರ ಸೀಟ್ನಲ್ಲಿ ಸಿಹಿಕಹಿ ಚಂದ್ರು, ಶಿಕ್ಷಣ ತಜ್ಞ ಗುರುರಾಜ ಕರಜಗಿ
ಇದಲ್ಲದೇ ಧ್ರುವ ಸರ್ಜಾರಿಗೆ ಪ್ರಚಾರಕ್ಕೆ ಬರುವಂತೆ ಇತರೆ ಕ್ಷೇತ್ರಗಳ ಅಭ್ಯರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ಶೂಟಿಂಗ್ ಇರೋ ಕಾರಣ ಧ್ರುವ ಸರ್ಜಾ ಕೆಲವೇ ಕೆಲ ಸ್ನೇಹಿತರ ಪರ ಪ್ರಚಾರಕ್ಕೆ ಹೋಗಲು ನಿರ್ಧರಿಸಿದ್ದು, ಏ.28ರಿಂದ ಎಷ್ಟು ದಿನ ಪ್ರಚಾರ ಕೈಗೊಳ್ಳಲಿದ್ದಾರೆ ಅನ್ನೋದು ನಾಳೆ ಅಧಿಕೃತವಾಗಲಿದೆ.