ಯೋಗರಾಜ್ ಭಟ್ ನಿರ್ದೇಶನ, ಕೌರವ ಖ್ಯಾತಿಯ ಬಿ.ಸಿ ಪಾಟೀಲ್ ಹಾಗೂ ಸೂರ್ಯ ಅಭಿನಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಗರಡಿ ಚಿತ್ರದ ಟ್ರೈಲರ್ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು. ಹಾವೇರಿಯ ರಾಣೆಬೆನ್ನೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು.
ದೇಸಿ ಕ್ರೀಡೆ ಕುಸ್ತಿ ಬಗ್ಗೆ ಗರಡಿ ಸಿನಿಮಾ ಮೂಡಿಬಂದಿದ್ದು, ಟ್ರೈಲರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಯಶಸ್ಸು ಸೂರ್ಯ, ಬಿ.ಸಿ ಪಾಟೀಲ್ ಕಾಂಬಿನೇಷನ್ ಬೊಂಬಾಟ್ ಆಗಿ ಮೂಡಿದೆ. ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾಗುವ ಲವ್, ಕಾಮಿಡಿ, ಸೆಂಟಿಮೆಂಟ್ ಹಾಗೂ ಕುಸ್ತಿಗೆ ಹಳ್ಳಿಗಳಲ್ಲಿ ಎಷ್ಟು ಮಹತ್ವ ಇದೆ ಎಂಬುದನ್ನು ಟ್ರೈಲರ್ ತೋರಿಸುತ್ತಿದೆ.
ಟ್ರೈಲರ್ ಬಿಡುಗಡೆ ಬಳಿಕ ಮಾಡಿದ ಮಾತನಾಡಿದ ನಟ ದರ್ಶನ್, ''ಮೊದಲಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಹೇಳುತ್ತ, ನಾನು ರಾಣೇಬೆನ್ನೂರಿಗೆ ಬಂದು 9 ವರ್ಷ ಆಯ್ತು. ರಾಣೇಬೆನ್ನೂರು ತುಂಬಾ ಚೆನ್ನಾಗಿದೆ. ಅಭಿಮಾನಿಗಳು ಹಾಗೂ ನಿರ್ಮಾಪಕರಿಗೋಸ್ಕರ ಬಂದೆ. ಗರಡಿ ಸಿನಿಮಾಗಾಗಿ ಬಂದಿಲ್ಲ. ನಮ್ಮ ಅಪ್ಪಾಜಿ ಅಂಬರೀಷ್ ನಂಗೆ ಒಂದು ಮಾತು ಹೇಳ್ತಿದ್ರು. ಯಾಕೋ ಸುಮ್ಮನೇ ಕೂತಿರ್ತೀರ ಅಂತ ಹೇಳುತ್ತಿದ್ದರು. ನೀವೆಲ್ಲ ಭಟ್ರ ಎಲ್ಲ ಸಿನಿಮಾ ನೋಡಿದ್ದೀರಾ. ಆದರೆ ಆ್ಯಕ್ಷನ್, ಲವ್, ಕುಸ್ತಿ ಈ ಗರಡಿಯಲ್ಲಿದೆ. ಈ ಚಿತ್ರವನ್ನು ಎಲ್ಲರೂ ಕೂಡ ಚಿತ್ರಮಂದಿರಕ್ಕೆ ಬಂದು ನೋಡುವ ಮೂಲಕ ನಮಗೆ ಅನ್ನದಾತರಾಗಬೇಕು'' ಎಂದು ಹೇಳಿದರು.
ಚಿತ್ರದ ಹೆಸರೇ ಹೇಳುವಂತೆ ಗರಡಿ ಪೈಲ್ವಾನ್ಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಮಾಡುತ್ತಿರುವ ಸಿನಿಮಾ. ನಟ ಸೂರ್ಯ ಹಾಗೂ ಸೋನಾಲ್ ಮಾಂಟೆರೊ ಮತ್ತು ಮಾಜಿ ಸಚಿವ, ನಟ ಬಿ.ಸಿ. ಪಾಟೀಲ್ ಜೊತೆಗೆ ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ, ರವಿಚೇತನ್, ತೇಜಸ್ವಿನಿ ಪ್ರಕಾಶ್, ನಯನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಿಶ್ವಿಕಾ ನಾಯ್ಡು ಕೂಡ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಗರಡಿ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಇಲ್ಲದೆ ಯು/ಎ ಸರ್ಟಿಫಿಕೆಟ್ ನೀಡಿದೆ.
ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದಾರೆ. ಗರಡಿ ಚಿತ್ರಕ್ಕೆ ವಿ. ಹರಿಕೃಷ್ಣ ಸುಮಧುರ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ. ನವೆಂಬರ್ 10ರಂದು ಗರಡಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ದಾವಣಗೆರೆ ಮಣ್ಣಲ್ಲಿ 'ಗರಡಿ' ಅಬ್ಬರ: ಯೋಗರಾಜ್ ಭಟ್, ಬಿ.ಸಿ ಪಾಟೀಲ್ ಪ್ರಚಾರ