ಕನ್ನಡ ಚಿತ್ರರಂಗದಲ್ಲಿ ನಟ ಚೇತನ್ ಚಂದ್ರ ಅಭಿನಯದ 'ಪ್ರಭುತ್ವ' ಸಿನಿಮಾ ಸುದ್ದಿಯಲ್ಲಿದೆ. ರಾಜಧಾನಿ, ಕುಂಭರಾಶಿ ಚಿತ್ರಗಳಿಂದ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಉಳಿಸಿಕೊಂಡಿರುವ ಚೇತನ್ ಬಹಳ ವರ್ಷಗಳ ಬಳಿಕ ಒಂದೊಳ್ಳೆ ಕಂಟೆಂಟ್ ಜೊತೆಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಕಥಾಹಂದರ ಹೊಂದಿರುವ ಪ್ರಭುತ್ವ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಟ್ರೇಲರ್ನಿಂದಲೇ ಗೆಲ್ಲುವ ಸುಳಿವು ನೀಡಿರುವ ಪ್ರಭುತ್ವ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗೋದಕ್ಕೆ ಸಜ್ಜಾಗಿದೆ.
ಇದೇ ವಿಶ್ವಾಸದಲ್ಲಿರೋ ನಟ ಚೇತನ್ ಚಂದ್ರ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು 15 ವರ್ಷಗಳೇ ಆಗಿದೆ. ಈ ಖುಷಿಯ ಜೊತೆಗೆ ಚೇತನ್ ಚಂದ್ರ ಅವರು ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಅಭಿಮಾನಿಗಳು ಹಾಗೂ ಪ್ರಭುತ್ವ ಸಿನಿಮಾ ಕಥೆಗಾರ ಮೇಘಡಹಳ್ಳಿ ಶಿವಕುಮಾರ್, ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ಸಮ್ಮುಖದಲ್ಲಿ ಕೇಕ್ ಕಟ್ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
ಈ ವೇಳೆ ಚೇತನ್ ಚಂದ್ರ ಮಾತನಾಡಿ, "ಈ ಎಲೆಕ್ಷನ್ ಸಮಯದಲ್ಲಿ ನಮ್ಮ ಪ್ರಭುತ್ವ ಸಿನಿಮಾ ಬಿಡುಗಡೆ ಆಗುತ್ತಿದೆ. ನನ್ನ ಸಿನಿಮಾ ಕೆರಿಯರ್ನಲ್ಲಿ ವಿನೂತನ ಪ್ರಯತ್ನದಲ್ಲಿ ಮೂಡಿ ಬಂದ ಚಿತ್ರ ಇದಾಗಿದೆ. ಎಲೆಕ್ಷನ್ಗೂ ಮುಂಚೆ ನಮ್ಮ ಪ್ರಭುತ್ವ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ನೋಡಿ, ಆಮೇಲೆ ನೀವು ಯಾವ ಅಭ್ಯರ್ಥಿಗೆ ಮತ ಹಾಕಬೇಕು ಅಂದು ಕೊಂಡಿದ್ದೀರೋ ಅವರಿಗೆ ನಿಮ್ಮ ವೋಟ್ ಹಾಕಿ" ಎಂದರು.
ಇದೇ ವೇಳೆ, ಚೇತನ್ ರಾಜರಾಜೇಶ್ವರಿ ನಗರದಲ್ಲಿ ಎಲೆಕ್ಷನ್ಗೆ ನಿಲ್ಲುತ್ತಾರೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದರು. "ಹೌದು, ನಾನು ಈ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಾಗಿದ್ದೇನೆ. ಆದರೆ, ಯಾವ ಪಕ್ಷ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುವೆ ಎಂದರು. ಈಗಾಗಲೇ ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ನಿಂದ ಕುಸುಮಾ ಹನುಮಂತರಾಯಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಇನ್ನು ಬಿಜೆಪಿಯಿಂದ ಹಾಲಿ ಸಚಿವ ಮುನಿರತ್ನ ಅವರಿಗೆ ಟಿಕೆಟ್ ಪಕ್ಕಾ ಅನ್ನೋ ಮಾತು ಕೇಳಿ ಬರುತ್ತಿದೆ. ಹೀಗಿರುವಾಗ ಚೇತನ್ ಚಂದ್ರ ಅವರು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ? ಎಂಬ ಪ್ರಶ್ನೆಯೊಂದು ಮೂಡಿದೆ. ಆದರೆ, ಈ ಬಗ್ಗೆ ಚೇತನ್ ಮಾತ್ರ, ನನ್ನ ಜೊತೆಗಿನ ಹಿರಿಯ ರಾಜಕಾರಣಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
'ಪ್ರಭುತ್ವ' ಕಥೆ ಹೀಗಿದೆ.. ಪ್ರಸ್ತುತ ರಾಜಕೀಯ ಸ್ಥಿತಿ, ಸರ್ಕಾರದ ವ್ಯವಸ್ಥೆ ಬಗ್ಗೆ ಮಾತನಾಡುವ ಸಿನಿಮಾ ಇದಾಗಿದೆ. ಮತವನ್ನು ಮಾರಾಟ ಮಾಡಿಕೊಳ್ಳಬಾರದು ಮತ್ತು ಮತದಾನದ ಮಹತ್ವನ್ನು ಈ ಚಿತ್ರ ಹೇಳಲಿದೆ. ಕಥೆಗಾರ ಮೇಘಡಹಳ್ಳಿ ಡಾ. ಶಿವಕುಮಾರ್ ನಮ್ಮ ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾಗೆ ಕಥೆ ಬರೆದಿದ್ದಾರೆ. ನಟ ಚೇತನ್ ಚಂದ್ರ ಸಿನಿಮಾಕ್ಕಾಗಿ ಸ್ವಲ್ಪ ಲುಕ್ ಬದಲಾವಣೆ ಮಾಡಿಕೊಂಡಿದ್ದಾರೆ. ಹಿರಿಯ ನಟ ಶರತ್ ಲೋಹಿತಾಶ್ವ, ಆದಿ ಲೋಕೇಶ್, ಅರವಿಂದ್ ರಾವ್, ಹರೀಶ್ ರಾಯ್, ವಿಜಯ್ ಚೆಂಡೂರ್, ವೀಣಾ ಸುಂದರ್, ರಾಜೇಶ್ ನಟರಂಗ, ಅನಿತಾ ಭಟ್ ಸೇರಿದಂತೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದೆ.
ಇನ್ನು ಚೇತನ್ ಚಂದ್ರ ಜೋಡಿಯಾಗಿ ಪಾವನ ಗೌಡ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದ್ದು, ವಿನಯ್ ಸಂಭಾಷಣೆ ಬರೆದಿದ್ದಾರೆ. ಮೇಘಾರಾಜ್ ಮೂವಿಸ್ ಬ್ಯಾನರ್ ಅಡಿ ರವಿರಾಜ್ ಎಸ್ ಕುಮಾರ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ನಟ ಚೇತನ್ ಚಂದ್ರ ಸ್ಪರ್ಧೆ?