ಬೆಂಗಳೂರು: ವಿವಾದಿತ ಟ್ವಿಟರ್ ಪೋಸ್ಟ್ ಪ್ರಕರಣದಲ್ಲಿ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರನ್ನು ಶೇಷಾದ್ರಿಪುರಂ ಪೊಲೀಸರು ಇಂದು ಬಂಧಿಸಿದ್ದಾರೆ.
ಚೇತನ್ ಅವರು ಹಿಂದೂಗಳ ಭಾವನೆಗೆ ಧಕ್ಕೆ ತರುವ ಪೋಸ್ಟ್ ಹಾಕಿದ್ದರು ಎಂದು ಹಿಂದೂಪರ ಕಾರ್ಯಕರ್ತ ಶಿವಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಇದರನ್ವಯ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಚೇತನ್ ಅವರನ್ನು ಬಂಧಿಸಿದ ಪೊಲೀಸರು ನಗರದ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಎಫ್ಐಆರ್‌ನಲ್ಲೇನಿದೆ?: ನಟ ಚೇತನ್ ಅವರು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಜಾತಿ, ಜಾತಿಗಳ ನಡುವೆ ವೈಮನಸ್ಸು ಉಂಟು ಮಾಡಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ. ಸಮಾಜದ ಶಾಂತಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಯಿಂದ ವಿವಿಧ ಕೋಮುಗಳ ನಡುವೆ ಘರ್ಷಣೆಗೆ ಪ್ರೇರಣೆ ನೀಡಿರುವ ಚೇತನ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಶಿವಕುಮಾರ್ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ.
ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ್ದ ನಟ: 2007ರಲ್ಲಿ 'ಆ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಚೇತನ್ ಕೆಲ ಕಾಲ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದರು. ಬಿರುಗಾಳಿ, ಸೂರ್ಯಕಾಂತಿ, ದಶಮುಖ, ಮೈನಾ, ನೂರೊಂದು ನೆನಪು, ಅಥಿರಥ, ರಣಮ್ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಗೆ ಜನಪ್ರಿಯತೆ ಪಡೆದು, ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ.
ಸಮಾಜ ಸೇವೆ, ಹೋರಾಟಗಳು.. ಕೆಲ ಸಿನಿಮಾಗಳಲ್ಲಿ ನಟಿಸಿದ ಬಳಿಕ ಸಾಮಾಜಿಕ ಹೋರಾಟಗಾರನಾಗಿ ಗುರತಿಸಿಕೊಂಡರು. 2016ರಲ್ಲಿ ಕೊಡುಗು ಜಿಲ್ಲೆಯ ದಿಡ್ಡಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಆದಿವಾಸಿಗಳನ್ನ ತೆರೆವುಗೊಳಿಸಲು ಅಂದಿನ ಸರ್ಕಾರ ಮುಂದಾಗಿತ್ತು. ಈ ಸರ್ಕಾರದ ವಿರುದ್ಧ ಅಲ್ಲಿನ ಆದಿವಾಸಿಗಳು ತೀವ್ರ ಪ್ರತಿಭಟನೆ ಮಾಡುತ್ತಿದ್ದರು. ಆಗ ಆದಿವಾಸಿಗಳ ಕೂಗಿಗೆ ನಟ ಚೇತನ್ ಆದಿವಾಸಿಗಳ ಪರವಾಗಿ ನಿಂತು ಹಗಲು ರಾತ್ರಿ ಅವರ ಪರ ಹೋರಾಟ ಮಾಡಿದ್ದರು. ಈ ಆದಿವಾಸಿಗಳ ಹೋರಾಟಕ್ಕೆ ಮಣಿದ ಸರ್ಕಾರ ಆದಿವಾಸಿಗಳಿಗೆ ಮನೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನ ಹಿಂಪಡೆದಿದ್ದರು. ಅಂದು ಆದಿವಾಸಿಗಳ ಹೋರಾಟಕ್ಕೆ ಜಯ ಸಿಕ್ಕ ಹಿನ್ನೆಲೆಯಲ್ಲಿ ನಟ ಚೇತನ್ ಹೋರಾಟಕ್ಕೆ ಫಲ ಸಿಕ್ಕಿ, ಅವರು ಸಾಮಾಜಿಕ ನ್ಯಾಯಕ್ಕಾಗಿ ಮುಂದಡಿ ಇಡಲು ಕಾರಣವಾಯಿತು.
ವಿವಾದಗಳು.. ಇತ್ತೀಚಿಗೆ ಸೂಪರ್ ಡೂಪರ್ ಹಿಟ್ ಆದ ಸಿನಿಮಾ 'ಕಾಂತಾರ' ಬಗ್ಗೆಯೂ ಕೆಲವು ಕಮೆಂಟ್‌ಗಳನ್ನು ನಟ ಚೇತನ್ ಮಾಡಿದ್ದರು. ಅವು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದವು. 'ಕಾಂತಾರ' ಸಿನಿಮಾದಲ್ಲಿ ತೋರಿಸಲಾಗಿರುವ ಭೂತಕೋಲ ಹಿಂದು ಧರ್ಮದ ಭಾಗವಲ್ಲ, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತಲೂ ಹಿಂದಿನಿಂದಲೂ ಇಲ್ಲಿನ ಮೂಲ ನಿವಾಸಿಗಳ ಬದುಕಿನಲ್ಲಿ ಇದ್ದಂಥಹವು ಎಂದು ಚೇತನ್ ಅಹಿಂಸಾ ಹೇಳಿದ್ದರು. ಚೇತನ್‌ರ ಈ ಹೇಳಿಕೆಯನ್ನು ಭೂತ ಆರಾಧಕರು, ದೈವ ನರ್ತಕರು ವಿರೋಧಿಸಿದ್ದರು. ಕೆಲವೆಡೆ ಚೇತನ್ ವಿರುದ್ಧ ದೂರುಗಳು ಸಹ ದಾಖಲಾದವು.
ನಟ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆ ಮತ್ತು ಕರಗಕ್ಕೆ ಅವಮಾನ ಮಾಡಲಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ಚೇತನ್, ಪ್ರಸ್ತುತ ಬೇಡಿಕೆಗಳು ಸೃಜನಶೀಲ ಸ್ವಾತಂತ್ರ್ಯಗಳಿಗೆ ಈ ಸಿನಿಮಾ ವಿರುದ್ಧವಾಗಿದೆ ಅಂತಾ ಹೇಳುವ ಮೂಲಕ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು.
ದಿವಗಂತ ಡಾ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ಬೆನ್ನಲ್ಲೇ ನಟ ಚೇತನ್ ಅವರು, ದಿವಂಗತ ನಟರ ಸ್ಮಾರಕಕ್ಕಾಗಿ ಸರ್ಕಾರಿ ಜಮೀನು, ಹಣ ಬಳಕೆ ಬೇಡ ಅಂತಾ ವಿವಾದಾತ್ಮಕ ಟ್ಟೀಟ್ ಮಾಡುವ ಮೂಲಕ ವಿಷ್ಣು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಈ ಹಿಂದೆ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿಗಳ ಕುರಿತು ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್ ಕೆಲ ತಿಂಗಳ ಹಿಂದೆಯಷ್ಟೇ ನ್ಯಾಯಾಂಗ ಬಂಧನ ಅನುಭವಿಸಿದ್ದರು.
ಇದನ್ನೂ ಓದಿ: ಹಿಂದೂ ವಿರೋಧಿ ಪೋಸ್ಟ್ ಆರೋಪ: ನಟ ಚೇತನ್ ಪರ ವಕೀಲರು ಹೇಳಿದ್ದೇನು?