ಕನ್ನಡ ಚಿತ್ರರಂಗದಲ್ಲಿ ಮದುವೆ ಪರ್ವ ಶುರುವಾಗಿದೆ. ಇದೀಗ ಸ್ಯಾಂಡಲ್ವುಡ್ ಹಿರಿಯಣ್ಣರಂತಿದ್ದ ದಿ. ಅಂಬರೀಶ್ ಮತ್ತು ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವಾರಗಳಿಂದ ಗಾಂಧಿನಗರದಿಂದ ಹಿಡಿದು ಅಂಬಿ ಅವರ ಜೆಪಿ ನಗರದಲ್ಲಿರುವ ಮನೆಯವರೆಗೂ ಕೇಳಿ ಬರುತ್ತಿರುವ ಮಾತು. ಅದರಂತೆ ಈ ಮಾತು ನಿಜವಾಗಿದ್ದು ಡಿಸೆಂಬರ್ 2ನೇ ವಾರದಲ್ಲಿ ಅಭಿಷೇಕ್ ಒಬ್ಬ ಖ್ಯಾತ ಮಾಡೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಅನ್ನೋದು. ಅಭಿಷೇಕ್ ಆಪ್ತ ಬಳಗದಿಂದ ಈ ಮಾತು ಕೇಳಿಬಂದಿತ್ತು.
ಅಷ್ಟಕ್ಕೂ ಅಭಿಷೇಕ್ ಅಂಬರೀಶ್ ಮದುವೆ ಆಗಲಿರುವ ಆ ಖ್ಯಾತ ಮಾಡೆಲ್ ಯಾರು ಅನ್ನೋದು ರಹಸ್ಯವಾಗಿತ್ತು. ಆದರೆ ಅಭಿಷೇಕ್ ಅಂಬರೀಶ್ ಇಷ್ಟಪಡುತ್ತಿರುವ ಆ ಹುಡುಗಿ ಯಾರು ಅನ್ನೋದು ರಿವೀಲ್ ಆಗಿದೆ. ಯೆಸ್ ಫ್ಯಾಷನ್ ಲೋಕದ ಗುರು ಪ್ರಸಾದ್ ಬಿದ್ದಪ್ಪ ಪುತ್ರಿ, ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಇವರಿಬ್ಬರೂ ಲವ್ ಮಾಡ್ತಾ ಇದ್ದರು ಅನ್ನೋದು ಗೊತ್ತಾಗಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಪ್ಯಾಲೇಸ್ ಗ್ರೌಂಡ್ನಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎನ್ನಲಾಗ್ತಿದೆ.
ಇನ್ನು, ಅಭಿಷೇಕ್ ಅಂಬರೀಶ್ ಕೈ ಹಿಡಿಯುತ್ತಿರುವ ಹುಡುಗಿ ಅವಿವಾ ಬಿದ್ದಪ್ಪ ಖ್ಯಾತ ಮಾಡೆಲ್. ಆದರೆ ನಿಶ್ಚಿತಾರ್ಥದವರೆಗೂ ಹುಡುಗಿಯ ಬಗ್ಗೆ ಆಗಲಿ ಅಥವಾ ಮದುವೆ ಬಗ್ಗೆ ಆಗಲಿ ಯಾರಿಗೂ ವಿಚಾರ ತಿಳಿಯಬಾರದು ಎನ್ನುವ ಕಾರಣದಿಂದ ಹುಡುಗಿ ಹಾಗೂ ನಿಶ್ಚಿತಾರ್ಥದ ದಿನಾಂಕವನ್ನು ಕುಟುಂಬದ ಸದಸ್ಯರು ಗುಟ್ಟಾಗಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮದುವೆ ವಿಚಾರವಾಗಿ ನೇರವಾಗಿ ಅಭಿಷೇಕ್ ಅಂಬರೀಶ್ ಅವರನ್ನು ಮೊದಲಿಗೆ 'ಈಟಿವಿ ಭಾರತ' ವರದಿಗಾರ ರವಿಕುಮಾರ್ ಫೋನ್ ಮೂಲಕ ಸಂಪರ್ಕಿಸಿದರು. ಆದ್ರೆ ಪಿಕ್ ಮಾಡಿರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಅಭಿಷೇಕ್ ಅವರೇ ಫೋನ್ ಮಾಡಿ 'ಪ್ರತಿ ಸಲ ನನ್ನ ಮದುವೆ, ನಿಶ್ಚಿತಾರ್ಥದ ಬಗ್ಗೆ ಈ ರೀತಿ ಸುದ್ದಿ ಕೇಳುತ್ತಿದ್ದೇನೆ. ನಾನು ನಿತ್ಯ ಕನಕಪುರಕ್ಕೆ ಶೂಟಿಂಗ್‌ಗೆ ಹೋಗುತ್ತಿದ್ದೇನೆ. ಇದರ ಮಧ್ಯೆ ಯಾವಾಗ ಹುಡುಗಿ ನೋಡಿದೆ, ಯಾವಾಗ ನಿಶ್ಚಿತಾರ್ಥ ಮಾಡಿಕೊಂಡೆ ಎಂಬುದು ಗೊತ್ತಿಲ್ಲ. ಪದೇ ಪದೇ ನಿಶ್ಚಿತಾರ್ಥದ ಬಗ್ಗೆ ಸುದ್ದಿ ಆಗ್ತಾ ಇದ್ರೆ ನನಗೆ ಹುಡುಗಿ ಸಿಗೋಲ್ಲ' ಅಂದರು.
ಆದರೆ ಸದ್ದಿಲ್ಲದೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಸಿದ್ಧತೆಗಳು ನಡೆಯುತ್ತಿವೆ ಅನ್ನೋದು ಅಷ್ಟೇ ಸತ್ಯ ಎನ್ನಲಾಗ್ತಿದೆ.
ಇದನ್ನೂ ಓದಿ: ಒಳ್ಳೆ ಹುಡುಗಿ ಸಿಕ್ಕಿದರೆ ನನಗೆ ಹೇಳಿ, ಮಗನಿಗೆ ಮದುವೆ ಮಾಡಿಸುತ್ತೇನೆ: ಸುಮಲತಾ ಅಂಬರೀಶ್ ಹೇಳಿಕೆ