ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್ ಖಾನ್ ಹಾಗೂ ಅವರ ಮೊದಲ ಪತ್ನಿ ರೀನಾ ದತ್ತಾ ಪುತ್ರಿ ಇರಾ ಖಾನ್ ಆಗಾಗ್ಗೆ ಖಿನ್ನತೆ ಸಮಸ್ಯೆ ಬಗ್ಗೆ ಚರ್ಚೆ ನಡೆಸುತ್ತಾರೆ. ಪೋಷಕರು ವಿಚ್ಛೇದನ ಪಡೆದ ಸಂದರ್ಭ ತಾನು ಖಿನ್ನತೆಗೊಳಗಾಗಿದ್ದ ವಿಚಾರವನ್ನು ಇರಾ ಖಾನ್ ಬಹಿರಂಗಪಡಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಪೋಷಕರು ಡಿವೋರ್ಸ್ ಪಡೆದಿದ್ದರೂ ಕೂಡ ಅದು ತಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು ಎಂದು ಇರಾ ಹೇಳಿಕೊಂಡಿದ್ದಾರೆ.
ಮಾನಸಿಕ ಆರೋಗ್ಯಕ್ಕಾಗಿ ಇರಾ ಖಾನ್ ಅವರು ಕ್ಲಿನಿಕ್ ಒಂದನ್ನು ಪ್ರಾರಂಭಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಖಾನ್ ಪುತ್ರಿ ಈ ಖಿನ್ನತೆಗೆ ತಮ್ಮನ್ನೇ ಜವಾಬ್ದಾರರನ್ನಾಗಿಸಿದ್ದಾರೆ. ಅಲ್ಲದೇ ಅದು 'ಭಾಗಶಃ ಅನುವಂಶಿಕ' (partly genetic) ಆಗಿರಬಹುದು ಎಂದು ಸಹ ಹೇಳಿಕೊಂಡಿದ್ದಾರೆ. ಜೊತೆಗೆ ಅಂತಹ ವಾತಾವರಣದಲ್ಲಿ ಅವರು ಹೇಗೆ ಬೆಳೆದರು ಎಂಬುದನ್ನೂ ಬಹಿರಂಗಪಡಿಸಿದ್ದಾರೆ.
ಖಿನ್ನತೆ ವಿಚಾರ ಕೊಂಚ ಜಟಿಲ. ಇದು ಅನುವಂಶಿಕ, ಮಾನಸಿಕ, ಸಾಮಾಜಿಕ ಅಂಶಗಳ ಸಂಯೋಜನೆ. ನನ್ನ ಪ್ರಕರಣದಲ್ಲಿ ಕೊಂಚ ಅನುವಂಶಿಕವಾಗಿದೆ. ನನ್ನ ತಂದೆ ಮತ್ತು ತಾಯಿಯ ಕುಟುಂಬದ ಹಿನ್ನೆಲೆ ಗಮನಿಸಿದರೆ, ಮಾನಸಿಕ ಆರೋಗ್ಯ ಸಮಸ್ಯೆ ಕೇಸ್ ಹೆಚ್ಚಿದೆ ಎಂದು ಬಹಿರಂಗ ಪಡಿಸಿದರು.
ಐದು ವರ್ಷಗಳ ಹಿಂದೆ ಖಿನ್ನತೆಗೊಳಗಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ನನ್ನ ತಜ್ಞ ತಂಡದ ಪ್ರಕಾರ, ನನ್ನ 'ಪೋಷಕರ ವಿಚ್ಛೇದನ'ವು ನನ್ನ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದ್ದ ವಿಷಯವಾಗಿತ್ತು. ಆ ಸಮಯದಲ್ಲಿ ನನ್ನ ಪೋಷಕರು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಿದರು. ಆದ್ರೆ ಅದು ನನ್ನನ್ನು ಟ್ರಿಗರ್ ಮಾಡುತ್ತಿತ್ತು. ಅದಾಗ್ಯೂ, ಪೋಷಕರು ಪರಸ್ಪರ ಒಪ್ಪಿಕೊಂಡು ಉತ್ತಮ ರೀತಿಯಲ್ಲಿ ಬೇರ್ಪಟ್ಟ ಹಿನ್ನೆಲೆ ನನ್ನ ಖಿನ್ನತೆಗೆ ಅವರನ್ನು ಹೊಣೆಯಾಗಿಸುವುದಿಲ್ಲ ಎಂದು ಇರಾ ಖಾನ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ನಟಿ ಶೆರ್ಲಿನ್ ಚೋಪ್ರಾಗೆ ರಾಹುಲ್ ಗಾಂಧಿಯವರನ್ನು ಮದುವೆಯಾಗೋ ಆಸೆಯಂತೆ - ಕಂಡೀಶನ್ಸ್ ಅಪ್ಲೈ!
ಇರಾ ಖಾನ್ ತಮ್ಮ ಖಿನ್ನತೆಗೆ ತಮ್ಮನ್ನೇ ಹೊಣೆಗಾರರನ್ನಾಗಿಸಿದ್ದಾರೆ. ಅಲ್ಲದೇ, ಯಾರೇ ಒಬ್ಬರು ಪ್ರೀತಿಸಲು ಅವರು ಖಿನ್ನತೆಗೂ ಒಳಗಾಗಬೇಕು ಎಂಬ ತಪ್ಪು ನಂಬಿಕೆಯನ್ನು 20 ವರ್ಷಗಳಿಂದ ಹೊಂದಿದ್ದೆ ಎಂದೂ ಕೂಡ ಬಹಿರಂಗಪಡಿಸಿದ್ದಾರೆ. ತನ್ನ ತಪ್ಪುಗಳನ್ನು ಜಾಗರೂಕತೆಯಿಂದ ಸರಿಪಡಿಸಿ, ಹೊಸ ಪ್ರಾರಂಭ ಹೊಂದುವ ಗುರಿ ಇಟ್ಟುಕೊಂಡಿದ್ದಾರೆ. ಚೇತರಿಸಿಕೊಳ್ಳುವ ಹಾದಿಯಲ್ಲಿ ಪೋಷಕರಾದ ಅಮೀರ್ ಖಾನ್ ಹಾಗೂ ರೀನಾ ದತ್ತಾ, ಅಮೀರ್ ಅವರ ಎರಡನೇ ಪತ್ನಿ (ಪ್ರಸ್ತುತ) ಕಿರಣ್ ರಾವ್ ಅವರ ಬೆಂಬಲ ಪಡೆಯಲಿದ್ದಾರೆ.
ಇದನ್ನೂ ಓದಿ: ತಮನ್ನಾಗಾಗಿ ಭದ್ರತೆ ಭೇದಿಸಿ ಬಂದ ಫ್ಯಾನ್...ನಾಜೂಕಾಗಿ ಪ್ರತಿಕ್ರಿಯಿಸಿದ ಸೌತ್ ಸ್ಟಾರ್ ನಟಿ
ಗೆಳೆಯ ನೂಪುರ್ ಶಿಖರೆ ಅವರೊಂದಿಗೆ ಸಿಶ್ಚಿತಾರ್ಥ ಮಾಡಿಕೊಂಡಿದ್ದು, ಅವರು ತಮ್ಮನ್ನು ಬೆಂಬಲಿಸುವ ಪ್ರಮುಖ ವ್ಯಕ್ತಿ ಎಂದು ನಂಬಿದ್ದಾರೆ. ಗೆಳೆಯನನ್ನು ತಮ್ಮ 'ಅದೃಷ್ಟ' ಎಂದೇ ಪರಿಗಣಿಸುತ್ತಾರೆ. ಮಾನಸಿಕ ಆರೋಗ್ಯ ಅಭಿವೃದ್ಧಿಗೆ ಅಗಸ್ತು ಫೌಂಡೇಶನ್ ಅನ್ನೂ ಸಹ ಸ್ಥಾಪಿಸಿದ್ದಾರೆ. ತಮ್ಮ ಮಾನಸಿಕ ಅನಾರೋಗ್ಯ ಕುರಿತು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡುತ್ತಾರೆ, ಜೊತೆಗೆ ಸಲಹೆಗಳನ್ನೂ ನೀಡುತ್ತಾರೆ.