ಟೈಟಾನಿಕ್ ಹೀರೋಯಿನ್ ಕೇಟ್ ವಿನ್ಸ್‌ಲೆಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರೀಕರಣದ ಸೆಟ್‌ನಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿ ಶೀಘ್ರವೇ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಈ ವಾರದ ಕೊನೆಯಲ್ಲಿ ಅವರು ಚಿತ್ರೀಕರಣದ ಸೆಟ್ಗೆ ವಾಪಸ್ ಆಗಲಿದ್ದಾರೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ.
ಕೇಟ್ ವಿನ್ಸ್‌ಲೆಟ್ ಸದ್ಯಕ್ಕೆ ಲೀ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣ ಹಂಗೇರಿಯಲ್ಲಿ ನಡೆಯುತ್ತಿದೆ. ಶೂಟಿಂಗ್ ವೇಳೆ ದೃಶ್ಯಕ್ಕಾಗಿ ನಿರ್ಮಿಸಿದ್ದ ಸೆಟ್‌ನಿಂದ ಕೇಟ್ ವಿನ್ಸ್‌ಲೆಟ್ ಆಯ ತಪ್ಪಿ ಕೆಳಗೆ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್, ಕೇಟ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಶೀಘ್ರವೇ ಅವರು ಗುಣಮುಖರಾಗಲಿದ್ದು, ಈ ವಾರದಲ್ಲಿ ಮತ್ತೆ ಕೇಟ್ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
'ಲೀ' ಚಿತ್ರವನ್ನು ಹಾಪ್‌ಸ್ಕೋಚ್ ಫಿಲ್ಮ್ಸ್ ಹಾಗೂ ರಾಕೆಟ್ ಸೈನ್ಸ್ ಕಂಪನಿ ಜೊತೆಗೂಡಿ ನಿರ್ಮಿಸುತ್ತಿದ್ದಾರೆ. ಎಲೆನ್ ಕುರಾಸ್ ನಿರ್ದೇಶಿಸುತ್ತಿರುವ ಈ ಸಿನಿಮಾ ಚಿತ್ರೀಕರಣ 2015 ರಿಂದ ನಡೆಯುತ್ತಿದೆ. ಕೇಟ್ ಆಸ್ಪತ್ರೆಗೆ ದಾಖಲಾದ ಕಾರಣ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದು ಅಮೆರಿಕದ ಖ್ಯಾತ ಮಹಿಳಾ ಫೋಟೋ ಜರ್ನಲಿಸ್ಟ್ ಎಲಿಜಬೆತ್ ಲೀ ಮಿಲ್ಲರ್ ಬಯೋಪಿಕ್ ಆಗಿದೆ. ಚಿತ್ರದಲ್ಲಿ ಕೇಟ್ ವಿನ್ಸ್‌ಲೆಟ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ.
1997 ರಲ್ಲಿ ತೆರೆ ಕಂಡ ಟೈಟಾನಿಕ್ ಸಿನಿಮಾ ಚಿತ್ರಪ್ರೇಮಿಗಳ ಫೇವರೆಟ್ ಲಿಸ್ಟ್‌ನಲ್ಲಿದೆ. ಈ ಚಿತ್ರ ನೋಡಿಯೇ ಸಾಕಷ್ಟು ಜನ ಕೇಟ್ ವಿನ್ಸ್‌ಲೆಟ್ ಅಭಿಮಾನಿಗಳಾಗಿದ್ದಾರೆ. ಈ ಸಿನಿಮಾವನ್ನು ಜೇಮ್ಸ್ ಕೆಮರೂನ್ ನಿರ್ದೇಶಿಸಿದ್ದರು. ಬ್ರಿಟಿಷ್ ಪ್ಯಾಸೆಂಜರ್ ಲೈನರ್, ಆರ್‌ಎಂಎಸ್ ಟೈಟಾನಿಕ್, 15 ಏಪ್ರಿಲ್ 1912 ರಲ್ಲಿ ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಮುಳುಗಿತ್ತು. ಈ ದುರ್ಘಟನೆಯಲ್ಲಿ 1500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇಂದಿಗೂ ಈ ಚಿತ್ರ ಪ್ರೇಮಿಗಳ ಮನದಲ್ಲಿ ಫೇವರೆಟ್ ಆಗಿಯೇ ಉಳಿದಿದೆ.
ಕೇಟ್ ವಿನ್ಸ್‌ಲೆಟ್ ಅಕ್ಟೋಬರ್ 5, 1975 ರಂದು ಇಂಗ್ಲೆಂಡ್ನಲ್ಲಿ ಜನಿಸಿದರು. ಅಜ್ಜಿ ಮತ್ತು ಅಜ್ಜ ಚಿತ್ರರಂಗದಲ್ಲಿದ್ದರು. ತಂದೆಯೂ ಸಹ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡುತ್ತಿದ್ದರು. ಕೇಟ್ ಅವರ ಹಿರಿಯ ಸಹೋದರಿಯರಾದ ಅನ್ನಾ ಮತ್ತು ಬೆಥ್ಲೂ ಆ ಕ್ಷೇತ್ರದಲ್ಲಿ ನೆಲೆಸಿದರು. ಕೇಟ್ ಅವರ ಬಾಲ್ಯದಲ್ಲಿ ಅವರ ಕುಟುಂಬದ ಆರ್ಥಿಕ ಸಂಪನ್ಮೂಲಗಳು ಸೀಮಿತವಾಗಿತ್ತು. ಚಾರಿಟಬಲ್ ಟ್ರಸ್ಟ್ ಒದಗಿಸಿದ ಉಚಿತ ಊಟದಲ್ಲಿ ತಾನು ತೊಡಗಿಸಿಕೊಳ್ಳಬೇಕಾದ ದಿನಗಳನ್ನು ಕೇಟ್ ನೆನಪಿಸಿಕೊಳ್ಳುತ್ತಾರೆ. ಐದನೇ ವಯಸ್ಸಿನಲ್ಲಿ ಶಾಲೆಯಲ್ಲಿ ಓದುತ್ತಿದ್ದಾಗ ಅಕ್ಕನ ಜೊತೆ ವೇದಿಕೆಗೆ ಹೋಗಿದ್ದಳು. ಹನ್ನೊಂದನೇ ವಯಸ್ಸಿನಲ್ಲಿ ಅವರು ನಟನಾ ಶಾಲೆಗೆ ಆಯ್ಕೆಯಾದರು.
'ಟೈಟಾನಿಕ್' ಚಲನಚಿತ್ರದೊಂದಿಗೆ ಸ್ಟಾರ್‌ಪಟ್ಟಿಗೇರಿದ ನಂತರ ಕೇಟ್ 'ಕ್ವಿಲ್ಸ್', 'ಐರಿಸ್', 'ಎಟರ್ನಲ್ ಸನ್ಶೈನ್ ಆಫ್ ದಿ ಸ್ಪಾಟ್ಲೆಸ್ ಮೈಂಡ್', 'ಫೈಂಡಿಂಗ್ ನೆವರ್ ಲ್ಯಾಂಡ್', 'ಲಿಟಲ್ ಚಿಲ್ಡ್ರನ್' ಮತ್ತು 'ರೆವಲ್ಯೂಷನರಿ ರೋಡ್' ನಂತಹ ಚಲನಚಿತ್ರಗಳಲ್ಲಿ ಮಿಂಚಿದರು. ಅವರು 'ದಿ ರೀಡರ್' (2008) ಚಿತ್ರಕ್ಕಾಗಿ BAFTA ಮತ್ತು ಆಸ್ಕರ್ ಪ್ರಶಸ್ತಿಗಳನ್ನು ಪಡೆದರು. 2011 ರಲ್ಲಿ 'ಕಾರ್ನೇಜ್', 'ಮೂವಿ 43' ಮತ್ತು 2013 ರಲ್ಲಿ 'ಲೇಬರ್ ಡೇ' ಚಿತ್ರಗಳಲ್ಲಿ ಅಭಿಮಾನಿಗಳ ಮನಗೆದ್ದರು.
1998 ರಲ್ಲಿ, 'ಟೈಟಾನಿಕ್' ಯಶಸ್ಸಿನ ನಂತರ ಅವರು ನಿರ್ದೇಶಕ ಜಿಮ್ ಎಡ್ವರ್ಡ್ಸ್ ಟ್ರಿಪಲ್ಟನ್ ಅವರನ್ನು ವಿವಾಹವಾದರು. ಅವರ ಮದುವೆ ಮೂರು ವರ್ಷಗಳ ಕಾಲ ಆರಾಮವಾಗಿಯೇ ನಡೆಯಿತು ಮತ್ತು 2001 ರಲ್ಲಿ ಕೊನೆಗೊಂಡಿತು. ನಂತರ ಅವರು 2003 ರಲ್ಲಿ ಪ್ರಸಿದ್ಧ ನಿರ್ದೇಶಕ ಮತ್ತು ನಿರ್ಮಾಪಕ ಸ್ಯಾಮ್ ಮೆಂಡೆಸ್ ಅವರನ್ನು ವಿವಾಹವಾದರು. 2011ರಲ್ಲಿ ವಿಚ್ಛೇದನ ಪಡೆದರು. ಅವರು 2012 ರಲ್ಲಿ ಎಡ್ವರ್ಡ್ ಅಬೆಲ್ ಸ್ಮಿತ್ ಅವರನ್ನು ಮೂರನೇ ವಿವಾಹವಾದರು. ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್ 2' ನಲ್ಲಿ ರೊನಾಲ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಕ್ಟೋಬರ್ 5ಕ್ಕೆ ಕೇಟ್ ವಿನ್ಸ್‌ಲೆಟ್ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಯುವ ನಟ ಕಿರೀಟಿ ಸಿನಿಮಾ ಸೆಟ್ಗೆ ಸರ್ಪ್ರೈಸ್ ವಿಸಿಟ್ ಕೊಟ್ಟ ಶಿವಣ್ಣ