ಕೊಪ್ಪಳ: ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕೆಲ ಸಿಬ್ಬಂದಿ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ. ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರ ಭಾವಚಿತ್ರ ಹಾಗೂ ಹೆಸರು ಇರುವ ಬ್ಯಾಗ್ ಗಳನ್ನು ಸಿಬ್ಬಂದಿ ತೆಗೆದುಕೊಂಡು ಬರುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ನಗರದ ಶ್ರೀ ಗವಿಸಿದ್ದೇಶ್ವರ ಬಿಇಡಿ ಕಾಲೇಜ್ ಆವರಣದಲ್ಲಿ ಇವಿಎಂ ಹಾಗೂ ಚುನಾವಣಾ ಪರಿಕರಗಳನ್ನು ತೆಗೆದುಕೊಂಡು ಮತಗಟ್ಟೆಗೆ ತೆರಳಲು ಬಂದಿದ್ದರು. ಕೆಲ ಸಿಬ್ಬಂದಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಈ ಹಿಂದೆ ಕೊಡುಗೆಯಾಗಿ ನೀಡಿರುವ ಬ್ಯಾಗ್ ಗಳನ್ನು ತಮ್ಮ ಅವಶ್ಯಕ ವಸ್ತುಗಳನ್ನಿಟ್ಟುಕೊಂಡು ತಂದಿದ್ದರು.
ಬ್ಯಾಗ್ ಗಳ ಮೇಲೆ ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಭಾವಚಿತ್ರ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಹೆಸರು ಪ್ರಿಂಟಾಗಿವೆ. ಈ ಇಬ್ಬರೂ ರಾಜಕೀಯ ಪ್ರಭಾವಿ ಮುಖಂಡರಾಗಿದ್ದು, ತಿಳಿದು, ತಿಳಿಯದೋ ಕೆಲವರು ಈ ಬ್ಯಾಗ್ ಗಳನ್ನು ತರುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಈ ಕುರಿತಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ಕುರಿತಂತೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.