ದಾವಣಗೆರೆ : ಸುಮಾರು ಎರಡು ದಶಕಗಳ ಹಿಂದಿನಿಂದಲೂ ಎರಡು ಕುಟುಂಬಗಳ ನಡುವಿನ ಹಣಾಹಣಿಗೆ ಬೆಣ್ಣೆನಗರಿ ಸಾಕ್ಷಿಯಾಗಿತ್ತು. ಲೋಕಸಭಾ ಚುನಾವಣೆ ಅಂದರೆ ಅದು ಶಾಮನೂರು ಶಿವಶಂಕರಪ್ಪ ಮತ್ತು ಜಿ. ಎಂ. ಸಿದ್ದೇಶ್ವರ್ ಕುಟುಂಬದ ನಡುವೆ ನೇರಾನೇರ ಫೈಟ್ ಆಗಿರುತಿತ್ತು. ಆದರೆ, ಈ ಬಾರಿ ಅಚ್ಚರಿ ಎಂಬಂತೆ ಕುರುಬ ಸಮುದಾಯದ ಮುಖಂಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಮೂಲಕ ಇಪ್ಪತ್ತೊಂದು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದ್ದ 'ಫ್ಯಾಮಿಲಿ ಫ್ರೆಂಡ್ಲಿ ಎಲೆಕ್ಷನ್ ವಾರ್'ಗೆ ಬ್ರೇಕ್ ಬಿದ್ದಿದೆ.
ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಟ್ಟು ದಾವಣಗೆರೆ ಸ್ವತಂತ್ರ ಜಿಲ್ಲೆಯಾಗಿ ಅಸ್ವಿತ್ವಕ್ಕೆ ಬಂದ ಮೇಲೆ ಮೊದಲ ಲೋಕಸಭಾ ಚುನಾವಣೆ ನಡೆದದ್ದು 1998ರಲ್ಲಿ. ಆಗ ಮುಖಾಮುಖಿಯಾದವರೇ ಶಾಮನೂರು ಶಿವಶಂಕರಪ್ಪ ಮತ್ತು ಜಿ. ಎಂ. ಸಿದ್ದೇಶ್ವರ್ ತಂದೆ ಮಲ್ಲಿಕಾರ್ಜುನಪ್ಪ. ಈ ಚುನಾವಣಾ ರಣಕಣದಲ್ಲಿ ಶಾಮನೂರು ಗೆದ್ದು ಬಂದರು. 1999 ರಲ್ಲಿ ಮತ್ತೆ ನಡೆದ ಚುನಾವಣೆಯಲ್ಲಿ ಇದೇ ಶಾಮನೂರು ಅವರನ್ನು ಸೋಲಿಸಿದ್ದ ಮಲ್ಲಿಕಾರ್ಜುನಪ್ಪ ತಮ್ಮ ಸೇಡು ತೀರಿಸಿಕೊಂಡು ಗೆಲುವಿನ ನಗೆ ಬೀರಿದರು.
ನಂತರ ನಡೆದ ಚುನಾವಣೆಗಳಲ್ಲಿ ಇಲ್ಲಿ ಗೆದ್ದದ್ದು ಬಿಜೆಪಿ ಮಾತ್ರ. ಮಲ್ಲಿಕಾರ್ಜುನಪ್ಪ ಪುತ್ರ ಈಗಿನ ಹಾಲಿ ಸಂಸದ ಜಿ. ಎಂ. ಸಿದ್ದೇಶ್ವರ್ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಭಾರಿಸಿದರು. 2004, 2009, 2014 ರಲ್ಲಿ ನಡೆದ ಲೋಕಸಭೆ ಚುನಾವಣೆಗಳಲ್ಲಿ ಶಾಮನೂರು ಶಿವಶಂಕರಪ್ಪ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ತೀರಾ ಕಡಿಮೆ ಮತಗಳ ಅಂತರದಲ್ಲಿ ಪರಾಜಯಗೊಂಡರು. ಆದರೆ, ಈ ‘ಬಾರಿ ಸಿದ್ದೇಶ್ವರ್‌ಗೆ ಮಂಜಪ್ಪ ಎದುರಾಳಿಯಾಗಿರುವುದರಿಂದ ಇಪ್ಪತ್ತೊಂದು ವರ್ಷಗಳ ಹಿಂದೆ ಶುರುವಾಗಿದ್ದ ಎರಡು ಕುಟುಂಬಗಳ ಚುನಾವಣಾ ಸಮರ ಅಂತ್ಯಕಂಡಿದೆ.
ಕುರುಬ ಸಮುದಾಯದ ಮಂಜಪ್ಪ ಅಚ್ಚರಿಯ ಅಭ್ಯರ್ಥಿ :
ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ವಿಚಾರ ಸಾಕಷ್ಟು ಕುತೂಹಲ ಕೆರಳಿಸಿತ್ತು. ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್ ಹೆಸರು ಬಲವಾಗಿ ಕೇಳಿ ಬಂದಿತ್ತಾದರೂ ಕೊನೆಗೆ ಅಚ್ಚರಿಯ ಅಭ್ಯರ್ಥಿಯನ್ನಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಟಿಕೆಟ್ ಪಡೆದು ಕಣಕ್ಕಿಳಿದಿದ್ದಾರೆ.
ಮಂಜಪ್ಪನವರಿಗೆ ಇದು ಸವಾಲಿನ ಚುನಾವಣೆಯೂ ಹೌದು. ಅಂತೂ ಇಂತೂ ಕೊನೆಗೂ ಟಿಕೆಟ್ ಪಡೆದ ಮಂಜಪ್ಪ ಸಂಸದ ಜಿ. ಎಂ. ಸಿದ್ದೇಶ್ವರ್‌ಗೆ ಪ್ರಬಲ ಪೈಪೋಟಿ ಕೊಡುತ್ತಾರಾ ಎಂಬ ಪ್ರಶ್ನೆಯೂ ಎದ್ದಿದೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಈಗ ಅಭ್ಯರ್ಥಿ ಘೋಷಣೆಯಾಗಿರುವ ಕಾರಣದಿಂದ ಉತ್ಸಾಹಗೊಂಡಿದ್ದಾರೆ. ಪ್ರಚಾರ ಕಾರ್ಯವನ್ನೂ ಚುರುಕುಗೊಳಿಸಿದ್ದಾರೆ. ಮಲ್ಲಿಕಾರ್ಜುನ್ ಸ್ಪರ್ಧಿಸುತ್ತಾರೆ ಎಂದುಕೊಂಡಿದ್ದ ಬಿಜೆಪಿಗೂ ಕೊನೆ ಕ್ಷಣದಲ್ಲಿ ಅಚ್ಚರಿ ತಂದಿದ್ದಂತೂ ನಿಜ.
ಸೋಲಿಲ್ಲದ ಸರದಾರರ ನಡುವಿನ ಫೈಟ್...!
ಹೊನ್ನಾಳಿಯವರಾದ ಎಸ್ಎಸ್ಎಲ್ಸಿ ಓದಿರುವ ಮಂಜಪ್ಪ, ಈವರೆಗೆ ತಾವು ಎದುರಿಸಿದ ಚುನಾವಣೆಗಳಲ್ಲಿ ಸೋತಿಲ್ಲ ಎಂಬುದು ವಿಶೇಷ. ಸಾಮಿಲ್ ಉದ್ಯಮ ನಡೆಸುತ್ತಿದ್ದ ಮಂಜಪ್ಪ 24 ನೇ ವಯಸ್ಸಿನಲ್ಲಿಯೇ ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಂದಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಇದೆ. 2000 ರಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.