ಬೆಂಗಳೂರು: ಅಮಿತ್ ಷಾ ಅವರನ್ನು ಹೋಲುವುದು ನನ್ನ ಸೌಭಾಗ್ಯ, ಬೆಂಗಳೂರಿನಲ್ಲಿ ನನ್ನನ್ನು ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ನಾಗರಿಕರು ಕನ್ನಡದ ಅಮಿತ್ ಷಾ ಎಂದು ಕರೆದಾಗ ಹೆಮ್ಮೆ ಎನಿಸುತ್ತದೆ ಎಂದು ಬಿಜೆಪಿ ನಾಯಕ, ಆರ್ ಎಸ್ಎಸ್ ಮುಖಂಡ ಅನಿಲ್ ಕತ್ತಿ ಅಭಿಪ್ರಾಯ ಪಟ್ಟಿದ್ದಾರೆ.
ಅಮಿತ್ ಷಾ ಕೂಡ ಕಾಲದಲ್ಲಿ ಭೂತ್ ಕಾರ್ಯಕರ್ತರಾಗಿದ್ದವರು, ನಾನೂ ಭೂತ್ ಕಾರ್ಯಕರ್ತನಾಗಿಯೇ ಬಿಜೆಪಿಯಲ್ಲಿ ನನ್ನ ಕಾರ್ಯ ಆರಂಭಿಸಿದ್ದೇನೆ, ವಕೀಲನಾಗಿದ್ದು, ಆರ್.ಟಿ. ನಗರದಲ್ಲಿ ನೆಲೆಸಿದ್ದೇನೆ. ಹೆಬ್ಬಾಳ ಭಾಗದ ನಾಯಕರು, ಖುದ್ದು ಕೇಂದ್ರ ಸಚಿವ ಹಾಗೂ ಸ್ಥಳೀಯ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡರು ಕೂಡ ಬೆಂಗಳೂರಿನ ಅಮಿತ್ ಷಾ ಎಂದೇ ಕರೆಯುತ್ತಾರೆ. ಬೆಂಗಳೂರಿನ ಬಿಜೆಪಿ ಕಾರ್ಯಕರ್ತನಾಗಿ ಹಾಗೂ ಶಕ್ತಿಕೇಂದ್ರದ ಪ್ರಮುಖನಾಗಿ ಕೆಲಸ ಮಾಡುತ್ತಿದ್ದೇನೆ. ಅಮಿತ್ ಷಾರನ್ನು ಹೋಲುವುದು ಮಹತ್ತರ ಗರಿ. ತಾವಿಬ್ಬರೂ ಒಂದೇ ತರಹ ಇರುವುದು ಕಾಕತಾಳೀಯ. ಒಂದೇ ಪಕ್ಷಕ್ಕಾಗಿ ಇಬ್ಬರೂ ದುಡಿಯುತ್ತಿದ್ದೇವೆ ಎಂದರು.
ಮಾತಿಗಿಂತ ಕೃತಿಯಿಂದ ಗುರುತಿಸಿಕೊಳ್ಳಬೇಕು
ನಾನು ಕೂಡ ಅಮಿತ್ ಶಾ ಅವರಂತೆ ಮಾತಿಗಿಂತ ಕೃತಿಯ ಮೂಲಕ ಗುರುತಿಸಿಕೊಳ್ಳಬೇಕು ಎಂದು ಆಶಿಸುತ್ತೇನೆ. ನನ್ನ ಕಾರ್ಯ ಹಾಗೂ ಶ್ರದ್ಧೆ ಪಕ್ಷದ ಪ್ರಗತಿಗೆ ಬಳಕೆಯಾಗಲಿ ಎಂದು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಕಳೆದ ಐದು ವರ್ಷಗಳಲ್ಲಿ ನೀಡಿದ ಕಾರ್ಯಕ್ರಮಗಳ ಮೂಲಕ ಯಾವ ರೀತಿ ಜನಪ್ರಿಯರಾಗಿದ್ದಾರೆ. ಅದೇ ರೀತಿ ಪಕ್ಷಕ್ಕೆ ತನ್ನನ್ನು ತೊಡಗಿಸಿಕೊಂಡು ಉತ್ತಮ ಹೆಸರು ಸಂಪಾದಿಸುವ ಆಸೆಯನ್ನು ಹೊಂದಿದ್ದೇನೆ. ನನ್ನನ್ನು ಇಂದು ಜನ ಅಮಿತ್ ಶಾ ಎಂದು ಗುರುತಿಸುತ್ತಿರುವುದು ಹೆಮ್ಮೆಯ ಸಂಗತಿ ಇದಕ್ಕಿಂತ ಹೆಚ್ಚಿನ ನಿರೀಕ್ಷೆ ಇಲ್ಲ ಎಂದರು.
ಅಮಿತ್ ಷಾ ಅವರನ್ನು ನಾನು ಯಾವತ್ತೂ ಭೇಟಿ ಮಾಡಿಲ್ಲ ಭೇಟಿ ಮಾಡುವ ಸಂದರ್ಭದ ಇಲ್ಲವೇ ಸೌಭಾಗ್ಯ ನನಗೆ ಇದುವರೆಗೂ ಕೂಡಿ ಬಂದಿಲ್ಲ. ಅವರ ಭೇಟಿಯ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಒಂದಲ್ಲ ಒಂದು ದಿನ ಭೇಟಿಯ ಸೌಭಾಗ್ಯ ದೊರೆಯುತ್ತದೆ ಎಂಬ ವಿಶ್ವಾಸ ಇದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪ್ರತಿಯೊಂದು ಭಾಷಣವನ್ನು ಚಾಚು ತಪ್ಪದೆ ಆಲಿಸಿ ಅದನ್ನು ಪಾಲಿಸುವ ಕಾರ್ಯ ಮಾಡುತ್ತಿದ್ದೇನೆ ಎಂದಿದ್ದಾರೆ.
ಅಮಿತ್ ಶಾರನ್ನು ಅನುಸರಿಸುತ್ತಿಲ್ಲ
ನಾನು ಯಾವತ್ತಿಗೂ ಅಮಿತ್ ಶಾರನ್ನು ಅನುಕರಿಸುವ ಪ್ರಯತ್ನ ಮಾಡಿಲ್ಲ ಆದರೆ ನನ್ನನ್ನು ಜನ ಅಮಿತ್ ಶಾ ಎನ್ನುವ ರೀತಿ ಗುರುತಿಸಿದ್ದಾರೆ. ಬೆಂಗಳೂರು ಮಾತ್ರವಲ್ಲ ರಾಜ್ಯದ ಎಲ್ಲೆಡೆ ನನ್ನನ್ನು ಬೆಂಗಳೂರಿನ ಅಮಿತ್ ಶಾ ಎಂದೇ ಗುರುತಿಸುತ್ತಾರೆ. ನನ್ನ ಮುಖ ಅವರ ಹೋಲಿಕೆ ಇರುವುದು ನನ್ನ ಸೌಭಾಗ್ಯವೇ ಹೊರತು ನಾನು ಅದನ್ನು ಅನುಕರಿಸುವ ಪ್ರಯತ್ನ ಎಂದಿಗೂ ಮಾಡಿಲ್ಲ ಎಂದಿದ್ದಾರೆ.