ಬಾಗಲಕೋಟೆ : ಲಾಕ್‌ಡೌನ್ ಆಗಿರುವ ಪರಿಣಾಮ ರಾತ್ರಿ ಮದ್ಯ ನೀಡದ ಹಿನ್ನೆಲೆ ಡಾಬಾದ ಮೇಲೆ ಪುಂಡರ ಗುಂಪು ದಾಳಿ ಮಾಡಿ ಹಾನಿ ಮಾಡಿರುವ ಘಟನೆ ಬಾಗಲಕೋಟೆ ನಗರದ ಹೂರ ವಲಯದಲ್ಲಿ ನಡೆದಿದೆ.
ಡಾಬಾದಲ್ಲಿ ಕೆಲಸ ಮಾಡುವ ಯುವಕರ ಮೇಲೆ ಹಲ್ಲೆಗೆ ಯತ್ನಿಸಿದ್ದಲದೇ, ಕಟ್ಟಿಗೆ, ಕಲ್ಲುಗಳಿಂದ ಡಾಬಾದ ಗಾಜುಗಳನ್ನ ಪುಡಿ ಪುಡಿ ಮಾಡಲಾಗಿದೆ.
ಸುಮಾರು 8 ರಿಂದ 10 ಜನರ ಪುಂಡರ ಗುಂಪಿನಿಂದ ದಾಳಿಗೈದ ಆರೋಪ ಮಾಡಲಾಗಿದೆ. ದಾಳಿಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.
ಬಾಗಲಕೋಟೆ ನಗರದಿಂದ 15 ಕಿ.ಮೀ ದೂರದ ಹುಬ್ಬಳ್ಳಿ-ವಿಜಯಪುರ ಹೆದ್ದಾರಿಯಲ್ಲಿರುವ ಸಚಿನ್ ಬಾರ್ & ರೆಸ್ಟೋರೆಂಟ್ (ಡಾಬಾ)ನಲ್ಲಿ, ಕಳೆದ ರಾತ್ರಿ 11 ಗಂಟೆಗೆ ಯುವಕರ ಗುಂಪು ಮದ್ಯ ಕೇಳಲು ಬಂದಿದ್ದರು.
ಕೊರೊನಾ ನೈಟ್ ಕರ್ಫ್ಯೂ ಹಿನ್ನೆಲೆ 9 ಗಂಟೆಗೆ ಬಂದ್ ಆಗಿದ್ದ ಡಾಬಾದ ಬಾಗಿಲು ತೆಗೆದು ಮದ್ಯ ಕೊಡುವಂತೆ ಗಲಾಟೆ ಮಾಡಿದ್ದಾರೆ. ಮದ್ಯ ಕೂಡದಿದ್ದಕ್ಕೆ ಡಾಬಾದ ಮೇಲೆ ಮನಬಂದಂತೆ ದಾಳಿ ನಡೆಸಿ ಯುವಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಪುಂಡರ ಗುಂಪಿನಿಂದ ತಪ್ಪಿಸಿಕೊಳ್ಳಲು ಕೆಲಸಗಾರರು ಓಡಿ ಹೋಗಿದ್ದಾರೆ. ಡಾಬಾ ಮಾಲೀಕನಿಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.