ಉನ್ನಾವೋ: ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆ ಸಮೀಪಿಸುತ್ತಿದೆ. ಇಲ್ಲಿನ ಉನ್ನಾವೋ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಮತದಾರರಿಗೆ ಹಂಚಲು ತಯಾರಿಸಿದ್ದ ಎರಡು ಕ್ವಿಂಟಾಲ್ ಜಿಲೇಬಿ ಹಾಗು 1,050 ಸಮೋಸಾಗಳನ್ನು ವಶಪಡಿಸಿಕೊಂಡಿದ್ದಾರೆ.
ಉನ್ನಾವೋ ಜಿಲ್ಲೆಯ ಹಸನ್ಗಂಜ್ ಪ್ರದೇಶದ ಗ್ರಾಮ ಪಂಚಾಯತಿ ಅಭ್ಯರ್ಥಿಯೊಬ್ಬರು ಮತದಾರರನ್ನು ಸೆಳೆದು ವೋಟು ಗಿಟ್ಟಿಸಿಕೊಳ್ಳಲು ಹೀಗೆ ತಿನಿಸುಗಳನ್ನು ತಯಾರಿಸಿ ವಿತರಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಜಿಲೇಬಿ, ಸಮೋಸಾ ಜೊತೆಗೆ ಅವನ್ನು ತಯಾರಿಸಲು ಬಳಸಿದ ಎಲ್‌ಪಿಜಿ ಸಿಲಿಂಡರ್, ಹಿಟ್ಟು, ತುಪ್ಪ ಸೇರಿದಂತೆ ಇತರ ಸಾಮಗ್ರಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಕೂಚ್ ಬೆಹಾರ್ ಫೈರಿಂಗ್ ಪ್ರಕರಣ: ಸಿಐಎಸ್ಎಫ್ ಸಿಬ್ಬಂದಿಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ
ಕೋವಿಡ್ ನಿಯಮಗಳು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚುನಾವಣೆ, ಫಲಿತಾಂಶ ಯಾವಾಗ?
ಉತ್ತರ ಪ್ರದೇಶದಲ್ಲಿ ಏ. 15 ರಿಂದ ಏ.29ರವರೆಗೆ ನಾಲ್ಕು ಹಂತಗಳಲ್ಲಿ ಪಂಚಾಯತ್ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.