ಬೆಂಗಳೂರು: ನಗರದ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಿದ ಬೆನ್ನಲ್ಲೇ ಈ ಕೃತ್ಯದಲ್ಲಿ ತೊಡಗಿದ್ದ ಮಹಿಳೆ ಸೇರಿ ಇಬ್ಬರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ರೋಹಿತ್ ಹಾಗೂ ನೇತ್ರಾ ಬಂಧಿತ ಆರೋಪಿಗಳು. ಸಮಾಜ ಸೇವಕನ ಸೋಗಿನಲ್ಲಿ ರೋಹಿತ್ ಗುರುತಿಸಿಕೊಂಡಿದ್ದ. ಈತನ ಪಕ್ಕದ ಮನೆಯಲ್ಲಿ ನೇತ್ರಾ ವಾಸವಾಗಿದ್ದು, ಈಕೆ ಕೂಡ ರೋಹಿತ್ ಜೊತೆ ಕೈಜೋಡಿಸಿದ್ದಾಳೆ. ಕೊರೊನಾ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಕೊಡಿಸುತ್ತೇವೆ. ಜೊತೆಗೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯವಿರುವ ಆಸ್ಪತ್ರೆಯನ್ನು ಶಿಫಾರಸು ಮಾಡುತ್ತೇವೆ ಎಂದು ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿಬಿಡುತ್ತಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ- ಸರ್ಕಾರಿ ಕೋಟಾದ ಬೆಡ್ಗಳ ದುರುಪಯೋಗ.. ಬೆಡ್ ಬುಕ್ಕಿಂಗ್ ದಂಧೆ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ
ಬೆಡ್ ಕೋರಿ ಬಿಬಿಎಂಪಿ ವಾರ್ ರೂಂಗೆ ಕರೆ ಮಾಡುವ ರೋಗಿಗಳ ಕುಟುಂಬಸ್ಥರನ್ನು ಸಂಪರ್ಕಿಸಿ, ಐಸಿಯು ಬೆಡ್ ಕೊಡಿಸುವುದಾಗಿ ನಂಬಿಸುತ್ತಿದ್ದ ಇವರು, ಒಬ್ಬೊಬ್ಬರಿಂದ ಸುಮಾರು 25 ಸಾವಿರ ಹಣ ಪಡೆದು ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಕೊರೊನಾ ಕರ್ಪ್ಯೂ ಮುಂದುವರಿಕೆ ಬಗ್ಗೆ 12ರ ನಂತರ ತೀರ್ಮಾನ: ಸಿಎಂ ಬಿಎಸ್ವೈ
ಈ ದಂಧೆ ಕುರಿತಂತೆ ಸಂಸದ ತೇಜಸ್ಚಿ ಸೂರ್ಯ ಬೆಡ್ ಬ್ಲಾಕಿಂಗ್ ಜಾಲದ ಕುರಿತು ಮಾಧ್ಯಮಗೋಷ್ಟಿ ನಡೆಸಿದ್ದರು. ಹಗರಣ ಬಯಲಾದ ಕೆಲವೇ ಕ್ಷಣಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬೆಡ್ ಕೊಡಿಸುವ ಸೋಗಿನಲ್ಲಿ ಹಲವರಿಗೆ ಮೋಸ ಮಾಡಿರುವ ಬಗ್ಗೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.