ಅಗರ್ತಲ (ತ್ರಿಪುರ): ಬಂದೂಕು ಹಿಡಿದು ಬಿಜೆಪಿ ಕಾರ್ಯಕರ್ತನ ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡಿರುವ ಘಟನೆ ತ್ರಿಪುರದ ಧಲೈ ಜಿಲ್ಲೆಯಲ್ಲಿ ನಡೆದಿದೆ.
ಕೃಪಾ ರಂಜನ್ ಚಕ್ಮಾ (37) ಮೃತಪಟ್ಟ ಬಿಜೆಪಿ ಕಾರ್ಯಕರ್ತ. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಸ್ಥಳೀಯ ಶಾಸಕರು ರಂಜನ್ ಚಕ್ಮಾ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.
ಈ ಕೊಲೆಯು ತ್ರಿಪುರ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿ (ಟಿಟಿಎಎಡಿಸಿ) ಚುನಾವಣೆಗೆ ಮುನ್ನ ನಡೆಸಿದ ಪಿತೂರಿಯಾಗಿದೆ. ನಮ್ಮ ಪಕ್ಷದ ಕಾರ್ಯಕರ್ತನನ್ನು ಕೊಂದವರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಬಿಜೆಪಿ ವಕ್ತಾರ ನಬೆಂಡು ಭಟ್ಟಾಚಾರ್ಜಿ ಹೇಳಿದ್ದಾರೆ.
ತ್ರಿಪುರ ಹೈಕೋರ್ಟ್ ಈ ವರ್ಷದ ಮೇ 17 ರೊಳಗೆ ಕೊರೊನಾದಿಂದಾಗಿ ಮುಂದೂಡಲ್ಪಟ್ಟಿದ್ದ 30 ಸದಸ್ಯರ ಟಿಟಿಎಎಡಿಸಿಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.