ಮುಜಾಫರ್ಪುರ್(ಬಿಹಾರ): ಪುತ್ರಿ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತಂದೆಯೋರ್ವ ಕೋರ್ಟ್ ಆದೇಶಕ್ಕೂ ಮುನ್ನವೇ ಆರೋಪಿಗೆ ಶಿಕ್ಷೆ ವಿಧಿಸಿದ್ದಾನೆ. ತನ್ನ ಮಗಳ ಜೀವನ ಹಾಳು ಮಾಡಿದವನ ಮೇಲೆ ತಂದೆ ಸೇಡು ತೀರಿಸಿಕೊಂಡಿರುವ ಘಟನೆ ಮುಜಾಫರ್ಪುರ್ದಲ್ಲಿ ನಡೆದಿದೆ. ಆರೋಪಿಯನ್ನು ಕೋರ್ಟ್ ಆವರಣದಲ್ಲೇ ಮಾಜಿ ಯೋಧ ಶೂಟ್ ಮಾಡಿ ಕೊಂದಿದ್ದಾನೆ.
ಮೃತ ಆರೋಪಿಯನ್ನು ದಿಲ್ಶಾದ್ ಹುಸೇನ್ ಎಂದು ಗುರುತಿಸಲಾಗಿದೆ. ಪ್ರಕರಣವೊಂದರ ವಿಚಾರಣೆಗೆ ಹಾಜರಾಗಲು ಆರೋಪಿ ಕೋರ್ಟ್ ಆವರಣದ ಗೇಟ್ ಬಳಿ ಬಂದಿದ್ದಾನೆ. ಈ ವೇಳೆ ಸ್ಥಳದಲ್ಲೇ ಇದ್ದ ಬಿಎಸ್ಎಫ್ನ ಮಾಜಿ ಯೋಧನಾಗಿರುವ ಸಂತ್ರಸ್ತೆಯ ತಂದೆಯು ಆರೋಪಿ ದಿಲ್ಶಾದ್ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆರೋಪಿಯನ್ನು ಕೋರ್ಟ್ಗೆ ಕರೆದಿದ್ದ ಪೊಲೀಸರು ಕೂಡಲೇ ಸಂತ್ರಸ್ತೆಯತಂದೆಯನ್ನು ಬಂಧಿಸಿದ್ದಾರೆ.
2020ರ ಫೆಬ್ರವರಿಯಲ್ಲಿ ಮಾಜಿ ಯೋಧನ ಪುತ್ರಿಯನ್ನು ದಿಲ್ಶಾದ್ ಕಿಡ್ನ್ಯಾಪ್ ಮಾಡಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಯುವತಿಯನ್ನು ರಕ್ಷಣೆ ಮಾಡಿದ್ದರು. ಅದೇ ಸಮಯದಲ್ಲಿ ಆರೋಪಿ ವಿರುದ್ಧ ಅತ್ಯಾಚಾರ ಕೇಸ್ ಕೂಡ ದಾಖಲಾಗಿತ್ತು.
ಪುತ್ರಿಯನ್ನು ಅತ್ಯಾಚಾರ ಮಾಡಿದ್ದಾನೆಂಬ ಕೋಪದಲ್ಲಿ ಆಕೆ ತಂದೆಯು ಆರೋಪಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ