ಬೆಂಗಳೂರು: ಗಾಜಿಯಾಬಾದ್ ವಿಡಿಯೋ ವೈರಲ್ ಪ್ರಕರಣದಲ್ಲಿ ಉತ್ತರಪ್ರದೇಶ ಪೊಲೀಸರು ನೀಡಿರುವ ನೋಟಿಸ್ ಪ್ರಶ್ನಿಸಿ ಟ್ವಿಟ್ಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ 5ಕ್ಕೆ ಮುಂದೂಡಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನ ಲೋನಿ ಬಾರ್ಡರ್ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಿಆರ್ ಪಿಸಿ ಸೆಕ್ಷನ್ 41ರಡಿ ಜಾರಿ ಮಾಡಿದ್ದ ನೋಟಿಸ್ ಪ್ರಶ್ನಿಸಿ ಮನೀಶ್ ಮಹೇಶ್ವರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾ, ಜಿ. ನರೇಂದರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಯುಪಿ ಪೊಲೀಸರ ಪರ ಮನವಿ ಮಾಡಿದ ವಕೀಲ ಪಿ. ಪ್ರಸನ್ನ ಕುಮಾರ್ ಅರ್ಜಿ ವಿಚಾರಣೆಯನ್ನು ಮುಂದೂಡುವಂತೆ ಕೋರಿದರು. ಮನವಿ ಪರಿಗಣಿಸಿದ ಪೀಠ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.
ಹಿಂದಿನ ವಿಚಾರಣೆ ವೇಳೆ ಮನೀಶ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ವಿವಾದಿತ ಟ್ವೀಟ್ ಸಂಬಂಧ ಹೇಳಿಕೆ ನೀಡಲು ಯುಪಿ ಪೊಲೀಸರು ಸೂಚಿಸಿದ್ದರು. ಆದರೆ, ಅರ್ಜಿದಾರರು ಬೆಂಗಳೂರಿನಲ್ಲಿ ಇದ್ದುದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವರಣೆ ನೀಡುವುದಾಗಿ ತಿಳಿಸಿದ್ದರು. ಇದನ್ನು ಒಪ್ಪದ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 41ರ ಅಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟಕ್ಕೂ ಮನೀಶ್ ಮಹೇಶ್ವರಿ ಟ್ವಿ ರ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯರಲ್ಲ. ವಿಡಿಯೋಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿಯೂ ಇವರದ್ದಲ್ಲ. ಸಂಸ್ಥೆಯ ಸೇಲ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಎಂಡಿ ಹುದ್ದೆ ನೀಡಲಾಗಿದೆ. ಹೀಗಾಗಿ ಪೊಲೀಸರು ಇವರಿಗೆ ನೋಟಿಸ್ ನೀಡಿರುವ ಕ್ರಮ ಸರಿಯಲ್ಲ ಎಂದಿದ್ದರು.
ವಾದ ಪರಿಗಣಿಸಿದ್ದ ಪೀಠ ಅರ್ಜಿದಾರರಾದ ಮನೀಶ್ ಮಹೇಶ್ವರಿ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಮಧ್ಯಂತರ ಆದೇಶ ನೀಡಿತ್ತಲ್ಲದೇ, ಅಗತ್ಯಬಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಹೇಳಿಕೆ ದಾಖಲಿಸಿಕೊಳ್ಳಲು ನಿರ್ದೇಶಿಸಿತ್ತು. ಇಂದು ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಯುಪಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣದ ಹಿನ್ನೆಲೆ:
ಗಾಜಿಯಾಬಾದ್ ನಲ್ಲಿ ತಾಯಿತ ಮಾರುವ ಮುಸ್ಲಿಂ ವೃದ್ಧನೋರ್ವನಿಗೆ ಆರು ಜನರ ಗುಂಪು ಥಳಿಸಿ ಆತನ ಗಡ್ಡ ಕತ್ತರಿಸಿ, ಬಲವಂತವಾಗಿ ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಎಂದು ಹೇಳಿಸಿದ್ದರೆನ್ನಲಾದ ವಿಡಿಯೋವೊಂದನ್ನು ಟ್ವಿಟ್ಟರ್ನಲ್ಲಿ ಹಾಕಲಾಗಿತ್ತು. ಈ ಸಂಬಂಧ ಗಾಜಿಯಾಬಾದ್ ನ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಗಲಭೆಗೆ ಪ್ರಚೋದಿಸಿದ್ದಾರೆ, ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ್ದಾರೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ ಹೊಂದಿದ್ದಾರೆ, ಕಿಡಿಗೇಡಿತನ ಹಾಗೂ ಕ್ರಿಮಿನಲ್ ಪಿತೂರಿ ಮಾಡಿದ್ದಾರೆ ಎಂಬ ಆರೋಪಗಳಡಿಯಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 153, 153 ಎ, 295 ಎ, 505, 120 ಬಿ ಮತ್ತು 34 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಜತೆಗೆ ಕೆಲ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮನೀಶ್ ಮಹೇಶ್ವರಿ ಅವರಿಗೆ ಸಿಆರ್ ಪಿಸಿ ಸೆಕ್ಷನ್ 41(ಎ) ಅಡಿ ನೋಟಿಸ್ ಜಾರಿ ಮಾಡಿದ್ದರು.