ತೆಲಂಗಾಣ: ಸಂಗಾರೆಡ್ಡಿ ಜಿಲ್ಲೆಯ ಅಮೀನ್‌ಪುರದಲ್ಲಿ ಕಳೆದ ಗುರುವಾರ ಪತ್ನಿ, ಪುತ್ರಿಗೆ ವಿಷ ಉಣಿಸಿ ಕೊಂದ ಬಳಿಕ ಟೆಕ್ಕಿ ಶ್ರೀಕಾಂತ್ ಗೌಡ್ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಪೊಲೀಸರಿಗೆ ತಲೆ ಬಿಸಿ ಮಾಡಿದೆ.
ಆತ್ಮಹತ್ಯೆಗೂ ಮುನ್ನ ಶ್ರೀಕಾಂತ್ ಗೌಡ್ ತನ್ನ ಫೋನ್ ಹಾಗೂ ಪತ್ನಿ ಅನಾಮಿಕ ಅವರ ಫೋನ್‌ಗಳನ್ನು ಸಂಪೂರ್ಣವಾಗಿ ಫಾರ್ಮ್ಯಾಟ್ ಮಾಡಿರುವ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೇ ಲ್ಯಾಪ್ ಟಾಪ್ ನಲ್ಲಿದ್ದ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸಿ ಹಾಕಿದ್ದಾರೆ. ಜೊತೆಗೆ ಇಂಟರ್ನೆಟ್‌ನಲ್ಲಿ ಗೂಗಲ್ ಹುಡುಕಾಟದ ಹಿಸ್ಟರಿಯನ್ನೂ ಸಹ ಅಳಿಸಿದ್ದಾರೆ.
ಒಂದೇ ಒಂದು ಸಾಕ್ಷಿ ಸಹ ಸಿಗಬಾರದೆಂಬ ಕಾರಣಕ್ಕೆ ಫೋನ್‌ನಿಂದ ಸಿಮ್ ಕಾರ್ಡ್ ತೆಗೆದು ಯಾರಿಗೂ ಸಿಗದಂತೆ ಎಸೆದಿದ್ದಾರೆ. ಫೋನ್‌ಗಳಲ್ಲಿ ಡೇಟಾ ಇಲ್ಲದಿರುವುದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮುಜುಗರವಾಗಿ ಪರಿಣಮಿಸಿದೆ. ತಜ್ಞರ ಸಹಯೋಗದಲ್ಲಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಮುಂದುವರೆದಿದೆ.
ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ..?
ಆತ್ಮಹತ್ಯೆಗೆ ಶ್ರೀಕಾಂತ್ ಗೌಡ್ ಕುಟುಂಬದವರ ಆರ್ಥಿಕ ಸಂಕಷ್ಟ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮನೆ ಖರೀದಿಸಲು ಇವರು ಬಜಾಜ್ ಫೈನಾನ್ಸ್‌ನಿಂದ 30 ಲಕ್ಷ ರೂ. ಗೃಹ ಸಾಲ ಪಡೆದಿದ್ದಾರೆ. ಮನೆ ಮೇಲಿನ ಮಹಡಿ ನಿರ್ಮಾಣದ ವೇಳೆ 11 ಲಕ್ಷ ರೂಪಾಯಿ ಟಾಪ್ ಅಪ್ ಸಾಲ ಪಡೆದಿದ್ದಾರೆ. 7 ಲಕ್ಷ ರೂಪಾಯಿಯಷ್ಟು ಮತ್ತೊಂದು ವೈಯಕ್ತಿಕ ಸಾಲ ಇರುವುದು ತನಿಖೆಯಿಂದ ಗೊತ್ತಾಗಿದೆ.
ಸಂಗಾರೆಡ್ಡಿ ಜಿಲ್ಲೆಯ ಅಮೀನ್‌ಪುರ ವಂದನಾ ಪುರಿ ಕಾಲೋನಿಯಲ್ಲಿ ಏಳು ವರ್ಷದ ಮಗು ಹಾಗೂ ಪತ್ನಿ ಅನಾಮಿಕಾ ಅವರಿಗೆ ವಿಷ ಕೊಟ್ಟು ಕೊಂದ ಬಳಿಕ ಟೆಕ್ಕಿ ಶ್ರೀಕಾಂತ್ ಗೌಡ್ ಮತ್ತೊಂದು ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದರು.
ಮೃತ ಶ್ರೀಕಾಂತ್ ಗೌಡ್ ಟಿಸಿಎಸ್‌ನಲ್ಲಿ ಸಾಫ್ಟ್ವೇರ್ ಕೆಲಸ ಮಾಡುತ್ತಿದ್ದರು. ಅನಾಮಿಕ ಕಾರ್ಪೊರೇಟ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದು, ನಿನ್ನೆ ಅಂತ್ಯಕ್ರಿಯೆ ನಡೆಸಲಾಗಿದೆ.
ಇದನ್ನೂ ಓದಿ: ಪತ್ನಿ, ಪುತ್ರಿಗೆ ವಿಷ ಉಣಿಸಿ ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ