ಮುಂಬೈ: ಕೆಲ ಹೊತ್ತಿನ ಹಿಂದಷ್ಟೇ 'ಈ ಜಗತ್ತಿಗೆ ವಿದಾಯ ಹೇಳುವ ಸಮಯ ಬಂದಿದೆ' ಎಂದು ವಾಟ್ಸ್ ಆ್ಯಪ್ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಪೊಲೀಸ್ ಅಧಿಕಾರಿ ಸಚಿನ್ ವಝೆ ಇದೀಗ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಚೇರಿಗೆ ಆಗಮಿಸಿದ್ದಾರೆ.
ಮನ್ಸುಖ್ ಹಿರೇನ್ ನಿಗೂಢ ಸಾವಿನ ಪ್ರಕರಣದಲ್ಲಿ ಸಚಿನ್ ವಝೆ ಹೆಸರು ಕೇಳಿಬಂದಿತ್ತು. ಬಂಧನ ಭೀತಿ ಹಿನ್ನೆಲೆ ಥಾಣೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪೂರ್ವ ಬಂಧನ ಜಾಮೀನು ಅರ್ಜಿಯನ್ನು ಸಚಿನ್ ಸಲ್ಲಿಸಿದ್ದರು.
ಇಂದು ತಮ್ಮ ವಾಟ್ಸ್ ಆ್ಯಪ್ನಲ್ಲಿ ಸಚಿನ್, ಮಾರ್ಚ್ 3, 2004 ರಂದು ಕೆಲವು ಅಧಿಕಾರಿಗಳು ನಕಲಿ ಪ್ರಕರಣದಲ್ಲಿ ನನ್ನನ್ನು ಬಂಧಿಸಿದ್ದರು. ನನ್ನ ಸಹೋದ್ಯೋಗಿಗಳು ನನ್ನನ್ನು ಮತ್ತೆ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಜಗತ್ತಿಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು ಸ್ಟೇಟಸ್ ಹಾಕಿಕೊಂಡಿದ್ದರು.
ಇದನ್ನೂ ಓದಿ: 'ಈ ಜಗತ್ತಿಗೆ ವಿದಾಯ ಹೇಳುವ ಸಮಯ ಬಂದಿದೆ ' ಎಂದು ಪೊಲೀಸ್ ಸ್ಟೇಟಸ್ ಹಾಕಿದ ಪೊಲೀಸ್ ಅಧಿಕಾರಿ ಸಚಿನ್ ವಾಜೆ
ಕೆಲ ದಿನಗಳ ಹಿಂದೆ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್ಯುವಿ ಕಾರು ಪತ್ತೆಯಾಗಿತ್ತು. ಮುಂಬೈ ಕ್ರೈಂ ಬ್ರ್ಯಾಂಚ್ ಹಾಗೂ ಎಟಿಎಸ್ ಜಂಟಿಯಾಗಿ ಪ್ರಕರಣ ತನಿಖೆ ನಡೆಸುತ್ತಿದ್ದು, ಮುಂಬೈ ಮೂಲದ ಮನ್ಸುಖ್ ಹಿರೇನ್ ಅವರು ಸ್ಕಾರ್ಪಿಯೋ ಕಾರು ಮಾಲೀಕ ಎಂದು ಹೇಳಲಾಗಿತ್ತು.
ಆದರೆ, ಮಾರ್ಚ್ 5ರಂದು ಥಾಣೆಯ ನದಿಯೊಂದರಲ್ಲಿ ಮನ್ಸುಖ್ ಹಿರೇನ್ ಮೃತದೇಹ ಪತ್ತೆಯಾಗಿತ್ತು. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿಸಿದೆ. ಆದರೆ ಆ ಸ್ಕಾರ್ಪಿಯೋ ಕಾರು ಮಾಲೀಕ ಮೃತ ಮನ್ಸುಖ್ ಹಿರೇನ್ ಅಲ್ಲ, ಥಾಣೆ ಮೂಲದ ಸ್ಯಾಮ್ ನ್ಯೂಟನ್ ಎಂಬವರಿಗೆ ಸೇರಿದ್ದು ಎನ್ನುವ ಸತ್ಯಾಂಶ ತಿಳಿದು ಬಂದಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.