ಕಲಬುರಗಿ: ಮಧ್ಯರಾತ್ರಿ ನಗರದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ರಾತ್ರಿ ಮನೆ ದರೋಡೆಗೆ ಇಳಿದಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಅಂತಾರಾಜ್ಯ ದರೋಡೆಕೋರರ ಮೇಲೆ ಫೈರಿಂಗ್ ಮಾಡಲಾಗಿದ್ದು, ಇಬ್ಬರ ಕಾಲಿಗೆ ಗುಂಡು ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪೂರ ತಾಲೂಕಿನ ಝಳಕೋಳ ಗ್ರಾಮದ ಲವ ಮತ್ತು ದೇವಿದಾಸ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದು, ಇಬ್ಬರನ್ನು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೈದಿಗಳ ವಾರ್ಡ್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಗಾಯಗೊಂಡ ಅಶೋಕ್ ನಗರ ಠಾಣೆಯ ಕಾನ್ಸ್‌ಟೇಬಲ್ ಶಿವಶರಣಪ್ಪ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ.. ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
ಪ್ರಕರಣದ ಹಿನ್ನೆಲೆ: ಮಹಾರಾಷ್ಟ್ರ ಮೂಲದ ತಂಡವೊಂದು ಹಗಲು ದೇವರ ಪ್ರತಿಮೆ ಹೊತ್ತು ಗಲ್ಲಿ ಗಲ್ಲಿ ಸೂತ್ತಾಟ ಮಾಡಿ ರಾತ್ರಿ ದರೋಡೆಗೆ ಇಳಿಯುತ್ತಿದ್ದರು. ಇತ್ತೀಚಿಗೆ ನಗರದಲ್ಲಿ ಮನೆಗಳ್ಳತನ ಹೆಚ್ಚಾದರಿಂದ ಸಾರ್ವಜನಿಕರು ರೋಸಿ ಹೋಗಿದ್ದರು. ಕಳ್ಳರ ಕೃತ್ಯ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ದರೋಡೆಕೋರರ ತಂಡ ಹಗಲು ದೇವರ ಪ್ರತಿಮೆ ಹೊತ್ತು ಓಡಾಡಿ ಸ್ಕೆಚ್ ಹಾಕಿಕೊಂಡು ರಾತ್ರಿ ದರೋಡೆ ಮಾಡಿ ಪರಾರಿಯಾಗುತ್ತಿದ್ದರು. ನಿನ್ನೆ ರಾತ್ರಿ ಬಿದ್ದಾಪೂರ ಕಾಲೋನಿಯಲ್ಲಿ ದರೋಡೆಗೆ ಇಳಿದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಶೋಕ ನಗರ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ನಾಲ್ವರು ದರೋಡೆಕೋರರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಪೊಲೀಸ್ ಮೇಲೆ ಹಲ್ಲೆಗೆ ಯತ್ನ: ಮಂಗಳೂರಲ್ಲಿ ಆರೋಪಿಗೆ ಖಾಕಿ ಗುಂಡೇಟು
ಚಾಕುವಿನಿಂದ ಹಲ್ಲೆಗೆ ಯತ್ನ: ಕಲಬುರಗಿ ಹೊರವಲಯದ ಬಬಲಾದ್ ಗ್ರಾಮದ ರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಈ ಗ್ಯಾಂಗ್ ವಾಸವಿತ್ತು. ಅವರು ವಾಸವಿದ್ದ ಜಾಗಕ್ಕೆ ಆರೋಪಿಗಳನ್ನ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಇಬ್ಬರು ದರೋಡೆಕೋರರು ತಮ್ಮ ಬಳಿ ಇದ್ದ ಚಾಕುವಿನಿಂದ ಅಶೋಕನಗರ ಠಾಣಾ ಪೊಲೀಸ್ ಕಾನ್ಸ್‌ಟೇಬಲ್ ಶಿವಶರಣಪ್ಪ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ಪಂಡಿತ್ ಸಾಗರ್ ತಮ್ಮ ಹಾಗೂ ಸಿಬ್ಬಂದಿಗಳ ಆತ್ಮ ರಕ್ಷಣೆಗಾಗಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದಾಗ್ಯೂ ದರೋಡೆಕೋರರು ತಮ್ಮ ಕೃತ್ಯ ಮುಂದುವರೆಸಿದಾಗ ಫೈರಿಂಗ್ ಮಾಡಿದ್ದಾರೆ. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.