ನವದೆಹಲಿ: ದೆಹಲಿಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಹಾಗೂ ಇಸ್ರೇಲ್ ಗುಪ್ತಚರ ಸಂಸ್ಥೆಯಾದ 'ಮೊಸಾದ್' ಭಾರತೀಯ ಅಧಿಕಾರಿಗಳೊಂದಿಗೆ ಕೈ ಜೋಡಿಸಿದ್ದಾರೆ.
ಶುಕ್ರವಾರ ಸಂಜೆ ದೆಹಲಿಯ ಔರಂಗಾಜೇಬ್ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಸುಧಾರಿತ ಸ್ಫೋಟಕ (ಐಇಡಿ) ಸಿಡಿದಿತ್ತು. ಈ ವೇಳೆ 4 ರಿಂದ 5 ಕಾರುಗಳಿಗೆ ಹಾನಿಯಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಸ್ಫೋಟದ ಜವಾಬ್ದಾರಿಯನ್ನು ಜೈಶ್-ಉಲ್-ಹಿಂದ್ ಎಂಬ ಸಂಘಟನೆ ವಹಿಸಿಕೊಂಡಿದೆ ಎಂದು ಟೆಲಿಗ್ರಾಮ್ ಖಾತೆಯಲ್ಲಿ ಸ್ಕ್ರೀನ್ಶಾಟ್ ವೈರಲ್ ಆಗಿದ್ದು, ಆ ಖಾತೆ ಬಗ್ಗೆ ದೆಹಲಿ ಪೊಲೀಸ್ ಅಪರಾಧ ವಿಭಾಗದ ಸೈಬರ್ ಘಟಕ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ: ಟೆಲಿಗ್ರಾಮ್ ಖಾತೆ ಬಗ್ಗೆ ದೆಹಲಿ ಪೊಲೀಸರಿಂದ ತನಿಖೆ
ಇನ್ನು ಸಿಸಿಟಿವಿ ದೃಶ್ಯಾವಳಿ ಕೂಡ ದೆಹಲಿ ಪೊಲೀಸರಿಗೆ ಸಿಕ್ಕಿದೆ. ಕ್ಯಾಬ್ನಲ್ಲಿ ಇಬ್ಬರು ವ್ಯಕ್ತಿಗಳು ಕಚೇರಿ ಮುಂದೆ ಬಂದಿಳಿದು, ಸ್ಫೋಟ ನಡೆದಿರುವ ಸ್ಥಳದೆಡೆಗೆ ನಡೆದು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ಯಾಬ್ ಚಾಲಕ ನೀಡಿದ ಮಾಹಿತಿ ಮೇರೆಗೆ ಆ ಇಬ್ಬರು ವ್ಯಕ್ತಿಗಳ ರೇಖಾಚಿತ್ರ ಬಿಡಿಸಿ, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.