ಹೈದರಾಬಾದ್: ಬೆಂಗಳೂರು ಸಮೀಪದ ಹೊಸೂರು ಪಟ್ಟಣದಲ್ಲಿನ ಮುತ್ತೂಟ್ ಫೈನಾನ್ಸ್ಗೆ ಶುಕ್ರವಾರ ಬೆಳಗ್ಗೆ ನುಗ್ಗಿ ದರೋಡೆ ಮಾಡಿ ಪರಾರಿಯಾಗಿದ್ದವರ ಪೈಕಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿರುವ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಶಾಖೆಯಿಂದ ಹಗಲು ಹೊತ್ತಿನಲ್ಲಿ ಸುಮಾರು 7 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು. ಶಸ್ತ್ರಸಜ್ಜಿತರಾಗಿ ಉತ್ತರ ಭಾರತ ಗ್ಯಾಂಗ್‌ನ ಏಳು ಜನರನ್ನು ತೆಲಂಗಾಣದ ಹೈದರಾಬಾದ್ ಹೊರವಲಯದಲ್ಲಿ ಶನಿವಾರ ಮುಂಜಾನೆ ಬಂಧಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಹೈದರಾಬಾದ್ ಮೂಲಕ ಜಾರ್ಖಂಡ್ ಮತ್ತು ಬಿಹಾರಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದ ಅಂತಾರಾಜ್ಯ ಡಕಾಯಿತರ ಗ್ಯಾಂಗ್ ಅನ್ನು ಕೃಷ್ಣಗಿರಿ ಪೊಲೀಸರು ತಮ್ಮ ಸಹವರ್ತಿಗಳಾದ ಹೈದರಾಬಾದ್ ಮತ್ತು ಸೈಬರಾಬಾದ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ಸಜ್ಜನರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತರ ರಾಜ್ಯಗಳಲ್ಲಿ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದ ಬಿಹಾರದ ಗ್ಯಾಂಗ್‌ನ ಮೇಲೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಟೋಲ್ ಗೇಟ್ ದತ್ತಾಂಶ ಮತ್ತು ತಾಂತ್ರಿಕ ನೆರವಿನ ಆಧಾರದ ಮೇಲೆ ಆರೋಪಿಗಳು ರಾಷ್ಟ್ರೀಯ ಹೆದ್ದಾರಿ 44ರ ಮೂಲಕ ಉತ್ತರ ಭಾರತದತ್ತ ಸಾಗುತ್ತಿದ್ದರು ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಆರು ಮಂದಿ ಪ್ರಯಾಣಿಕರ ದುರ್ಮರಣ
ಬಂಧಿತ ಆರೋಪಿಗಳಾದ ಮಧ್ಯಪ್ರದೇಶದ ಜಬಲ್ಪುರದ ಅಧಾರ್ಧಲ್ ಗ್ರಾಮದ ವಿದ್ಯಾರ್ಥಿ ರೂಪ್ ಸಿಂಗ್ ಬಾಗಲ್ (22) ಮತ್ತು ಶಂಕರ್ ಸಿಂಗ್ ಬಾಯಲ್ ಬಾಗಲ್ (36), ಜಾರ್ಖಂಡ್‌ನ ರಾಂಚಿಯ ಪವನ್ ಕುಮಾರ್ ಬಿಸ್ಕರ್ಮಾ, ಬುಪೇಂದರ್ ಮಂಜಿ (24) ಮತ್ತು ವಿವೇಕ್ ಮಂಡಲ್ (32) ಎಂಬುವವರು ಎಸ್ಯುವಿ ವಾಹನದಲ್ಲಿ ಚಲಿಸುತ್ತಿದ್ದರು. ಅವರನ್ನು ರಂಗಾರೆಡ್ಡಿ ಜಿಲ್ಲೆಯ ತೋಂಡುಪಲ್ಲಿ ಗ್ರಾಮದಲ್ಲಿ ತಡೆದು ತಪಾಸಣೆ ನಡೆಸಲಾಯಿತು. ಕಂಟೇನರ್ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶದ ಮೀರತ್‌ನ ಟೆಕ್ರಮ್ (55) ಮತ್ತು ರಾಜೀವ್ ಕುಮಾರ್ (35) ಅವರನ್ನು ಸಹ ಬಂಧಿಸಲಾಗಿದೆ. ಆರೋಪಿಗಳಿಂದ ಕದ್ದ 25.91 ಕೆಜಿ 7.5 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ₹ 96,000 ನಗದು, ಏಳು ಬಂದೂಕು ಮತ್ತು 89 ಲೈವ್ ರೌಂಡ್ಸ್ ವಶಪಡಿಸಿಕೊಳ್ಳಲಾಗಿದೆ.