ಕೋಲಾರ: ಕೌಟುಂಬಿಕ ಕಲಹದಿಂದ ಸೊಸೆಯ ಮೇಲೆ ಅತ್ತೆ-ಮಾವ ಹಾಗೂ ಸಂಬಂಧಿಕರು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ರಾಜಾ ನಗರದ ನಿವಾಸಿ ಅರಬಿಂದ್ ಸುಲ್ತಾನ ತೀವ್ರ ಹಲ್ಲೆಗೊಳಗಾಗಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಗೃಹಿಣಿ. 2014ರಲ್ಲಿ ಈಕೆ ಪ್ರೀತಿಸಿ ಮದುವೆಯಾಗಿದ್ದಳು. ಸುಲ್ತಾನಗೆ ಇಬ್ಬರು ಮಕ್ಕಳಿದ್ದು, ಮದುವೆಯಾದಗಿನಿಂದಲೂ ಅತ್ತೆ, ಮಾವ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಹೀಗೆ ದಿನನಿತ್ಯದ ಕಿರುಕುಳ ತಾಳಲಾರದೆ ನಗರದ ಬೇರೆ ಕಡೆ ಅವರು ವಾಸವಾಗಿದ್ದರು. ಅಲ್ಲಿಯೂ ಸೊಸೆಯ ಬಗ್ಗೆ ಮಗನಿಗೆ ಇಲ್ಲಸಲ್ಲದ ದೂರುಗಳನ್ನು ಹೇಳಿ ವಿಚ್ಛೇದನಕ್ಕೆ ಅರ್ಜಿ ಹಾಕಿಸಿ ಮೊಮ್ಮಕ್ಕಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರಂತೆ.
ನವೆಂಬರ್ 26 ರಂದು ರಾಜಾ ನಗರದಲ್ಲಿರುವ ತನ್ನ ಮಕ್ಕಳನ್ನು ಸುಲ್ತಾನ ಮಾತನಾಡಿಸಿದ್ದಾಳೆ. ಇದನ್ನು ಕಂಡ ಮಾವ ನವಾಜ್ ಬೇಗ್, ಅತ್ತೆ ನಪ್ಸಿನ್ ತಾಜ್, ಮೈದಾ ನಾಸಿರ್ ಬೇಗ್, ಸಂಬಂಧಿಗಳಾದ ಹಸ್ಮಾ ಬೇಗ್, ಶಾಹಿದ್ ಹಾಗೂ ಮೋಹಿನ್ ಎಂಬುವವರು ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಸದ್ಯ ಗಾಯಾಳು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನ್ಯಾಯಕ್ಕಾಗಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದ್ರೆ ಇದುವರೆಗೂ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ಆರೋಪಿಸಿದ್ದಾಳೆ.
ಇದನ್ನೂ ಓದಿ: ಕಾಲುವೆಯಲ್ಲಿ ಕಾಲು ತೊಳೆಯಲು ಹೋದ ವಿದ್ಯಾರ್ಥಿ ನೀರುಪಾಲು