ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಶೆಟರ್ ಮುರಿದು ಒಳನುಗ್ಗಿದ ಕಳ್ಳರು 3.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಈ ದರೋಡೆ ಪ್ರಕರಣವನ್ನು ಭೇದಿಸಿದ ದೊಡ್ಡಬಳ್ಳಾಪುರ ಪೊಲೀಸರು ಉತ್ತರ ಪ್ರದೇಶದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟ್ರಕ್ ಚಾಲಕ ಅಲಾಪುರ ನಿವಾಸಿ ಸರ್ತಾಜ್ ಹಾಗೂ ಉಜಾನಿಯ ನಿವಾಸಿ ಕಾಳಿಚರಣ್ ಬಂಧಿತರು. ದೊಡ್ಡಬಳ್ಳಾಪುರ ತಾಲೂಕು ಹೊಸಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನವೆಂಬರ್ 25ರಂದು ರಾತ್ರಿ ದರೋಡೆಖೋರರು ಕಳ್ಳತನ ಕೃತ್ಯ ಎಸಗಿದ್ದರು. ಈ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಪೊಲೀಸರು ಉತ್ತರ ಪ್ರದೇಶದ ಪೊಲೀಸರ ಸಹಕಾರ ಪಡೆದು ಇಬ್ಬರು ಖದೀಮರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬದಾಯೂನ್ ಜಿಲ್ಲೆಯ ಅಲಾಪುರ್ ಗ್ರಾಮದಲ್ಲಿ ಕಳ್ಳರು ಪೊಲೀಸರು ಬೀಸಿದ ಜಾಲಕ್ಕೆ ಬಿದ್ದಿದ್ದಾರೆ.
ಉತ್ತರ ಪ್ರದೇಶದ ಗ್ಯಾಂಗ್: ಉತ್ತರ ಪ್ರದೇಶದ ಕಳ್ಳರ ಗ್ಯಾಂಗ್ ಕೃತ್ಯ ನಡೆಸಿದ್ದು, ಕಳ್ಳತನಕ್ಕಾಗಿ ಒಂದು ತಿಂಗಳ ಮುಂಚೆ ಕಳ್ಳರು ಪೂರ್ವ ತಯಾರಿ ನಡೆಸಿದ್ದರು. ಪೂರ್ವನಿಯೋಜಿತವಾಗಿ ಟ್ರಕ್ ನಲ್ಲಿ ಗ್ಯಾಸ್ ಕಟರ್, ಸಿಲಿಂಡರ್ ಹಾಗೂ ಕಳ್ಳತನಕ್ಕೆ ಬೇಕಾದ ಉಪಕರಣಗಳೊಂದಿಗೆ ಖದೀಮರು ಈ ಕೃತ್ಯ ಮಾಡಿದ್ದರು. ಗ್ಯಾಸ್ ಕಟರ್ ದಿಂದ ಶೆಟರ್ ಹಾಗೂ ಲಾಕರ್ ತೆರೆದು 3.5 ಕೋಟಿ ಮೌಲ್ಯದ 12 ಕೆ.ಜಿ. ಚಿನ್ನಾಭರಣ ಹಾಗೂ 15 ಲಕ್ಷ ನಗದು ದೋಚಿ ಪರಾರಿಯಾಗಿದ್ದರು.
ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕಳ್ಳರ ಬಂಧನಕ್ಕಾಗಿ ವಿಶೇಷ ಪೊಲೀಸ ತಂಡವನ್ನೂ ನಿಯೋಜಿಸಿತ್ತು. 20 ದಿನಗಳಿಂದ ಪೊಲೀಸರು ಕಳ್ಳರನ್ನು ಸೆರೆ ಹಿಡಿಯಲು ಬೆನ್ನತ್ತಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಟ್ರಕ್ ನಂಬರ್ ಪೊಲೀಸರಿಗೆ ದರೋಡೆಕೋರರ ಮಹತ್ವದ ಸುಳಿವು ಸಿಕ್ಕಿತು. ಉತ್ತರಪ್ರದೇಶದ ಅಲಾಪುರದ ಕಾಕರಾಲ ಪೊಲೀಸರ ನೆರವು ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂಓದಿ:ಬಂಟ್ವಾಳ: ಒಂಟಿ ಮಹಿಳೆ ಕಟ್ಟಿಹಾಕಿ ದರೋಡೆ