ಮೊದಸಾ (ಗುಜರಾತ್): 2,500 ರೂಪಾಯಿ ಮರುಪಾವತಿಸಲು ವಿಫಲವಾದ ಆರೋಪದ ಮೇಲೆ ಮೂವರು ವ್ಯಕ್ತಿಗಳು ಸೇರಿ ಯುವಕನೊಬ್ಬನ ಕೈಯನ್ನೇ ಕತ್ತರಿಸಿದ ಘಟನೆ ಗುಜರಾತ್‌ನ ಅರಾವಳಿ ಜಿಲ್ಲೆಯ ಬಯಾದ್‌ನಲ್ಲಿ ನಡೆದಿದೆ.
ದೀಪಾವಳಿಯ ಆರಂಭದ ದಿನವಾದ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಕೈ ಕಟ್ಟಾದ ಸಂತ್ರಸ್ತನನ್ನು ವಿಜಯ್ ಸಲಾತ್ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿಯನ್ನು ಸೈಲೇಶ್ ಬಾರೋಟ್ ಎಂದು ತಿಳಿದು ಬಂದಿದೆ.
ಏನಿದು ಘಟನೆ: ನಾನು ಸೈಲೇಶ್ ಬರೋಟ್ ಅವರಿಂದ 2,500 ರೂ. ಸಾಲ ಪಡೆದಿದ್ದೆ. ಸೋಮವಾರ ಸಂಜೆ ಅವರು ಹಣವನ್ನು ವಸೂಲಿ ಮಾಡಲು ನನ್ನ ಮನೆಗೆ ಬಂದಿದ್ದರು. ಆದರೆ ತಕ್ಷಣಕ್ಕೆ ಹಣವನ್ನು ಮರುಪಾವತಿಸಲು ನನಗೆ ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಸಾಲದಾತ ನನ್ನ ಮಣಿಕಟ್ಟಿಗೆ ಹೊಡೆದ ಮತ್ತು ನನ್ನ ಕೈಯನ್ನು ಕತ್ತರಿಸಿದ. ಅಷ್ಟೇ ಅಲ್ಲ ನಂತರ ಅವನು ನನ್ನ ಕಾಲುಗಳ ಮೇಲೆ ಕತ್ತಿಯಿಂದ ಪ್ರಹಾರ ಮಾಡಿದ್ದಾನೆ ಎಂದು ಸಂತ್ರಸ್ತ ಯುವಕ ನಡೆದ ಘಟನೆಯ ವಿವರವನ್ನು ನೀಡಿದ್ದಾನೆ.
ಹೀಗೆ ನನ್ನ ಮೇಲೆ ದಾಳಿ ಮಾಡಿದ ಆರೋಪಿ ಸೈಲೇಶ್ ಜೊತೆಗೆ ಆತನ ತಂದೆ ಕಾನು ಮತ್ತು ರವಿ ಬರೋಟ್ ಎಂಬುವರು ಇದ್ದರು ಎಂದು ಸಂತ್ರಸ್ತ ವಿಜಯ್ ತಿಳಿಸಿದ್ದಾರೆ.
ಆರೋಪಿಗಳು ಪರಾರಿ: ಸಂತ್ರಸ್ತನನ್ನು ಗಾಯಗೊಳಿಸಿದ ನಂತರ ಮೂವರೂ ಪರಾರಿಯಾಗಿದ್ದಾರೆ. ವಿಜಯ್ ಅವರನ್ನು ಬಯಾದ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿಂದ ವೈದ್ಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ಪ್ರಕರಣದ ಬಗ್ಗೆ ಮಾತನಾಡಿರುವ ತನಿಖಾ ಅಧಿಕಾರಿ ಸಂಜಯ್, ವೈದ್ಯರು ಏಳು ಗಂಟೆಗಳ ಸತತ ಪ್ರಯತ್ನ ಪಟ್ಟರೂ ಸಂತ್ರಸ್ತನ ಕೈ ಮರುಜೋಡಿಸುವಲ್ಲಿ ಯಶಸ್ವಿಯಾಗಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಈ ಸಂಬಂಧ ಸಂತ್ರಸ್ತನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಸೈಲೇಶ್, ಆತನ ತಂದೆ ಮತ್ತು ಇತರರ ವಿರುದ್ಧ ಕೊಲೆ ಯತ್ನದ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಸೈಲೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಇದನ್ನು ಓದಿ:ಕೊಯಮತ್ತೂರು ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಐವರ ಬಂಧನ: ಇದು ಆತ್ಮಹತ್ಯಾ ದಾಳಿಯೇ?