ತಿರುವನಂತಪುರಂ : ವೈದ್ಯೆ ಜೊತೆಗೆ ಅನುಚಿತವಾಗಿ ವರ್ತಿಸಿ ವಾರದ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ವೈದ್ಯೆ ಬೆಳಗಿನಜಾವ ವಾಕಿಂಗ್ ಹೋಗುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈತನನ್ನು ಸರ್ಕಾರಿ ಕಾರಿನ ಚಾಲಕ ಸಂತೋಷ್ ಎಂದು ಗುರುತಿಸಲಾಗಿದೆ.
ಈ ವ್ಯಕ್ತಿ ಕೇರಳದ ಸಚಿವರೊಬ್ಬರ ಖಾಸಗಿ ಕಾರ್ಯದರ್ಶಿಯ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕೇರಳ ಸರ್ಕಾರದ ನೋಂದಣಿ ಬೋರ್ಡ್ ಹೊಂದಿರುವ ಇನ್ನೋವಾ ಕಾರನ್ನು ರಾತ್ರಿ ವೇಳೆ ತನ್ನ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಕಳೆದ ಬುಧವಾರ, ವೈದ್ಯೆ ನಗರದ ಸರ್ಕಾರಿ ವಸ್ತುಸಂಗ್ರಹಾಲಯದ ಕಾಂಪೌಂಡ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂಬಾಲಿಸಿದ್ದಲ್ಲದೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಕೂಡಲೇ ಆ ಮಹಿಳಾ ಡಾಕ್ಟರ್ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬರುವ ವೇಳೆಗೆ ಆರೋಪಿ ಪರಾರಿಯಾಗಿದ್ದ. ಈ ಘಟನೆಯ ದೃಶ್ಯವನ್ನು ಸ್ಥಳೀಯ ಮಾಧ್ಯಗಳು ಪ್ರಸಾರ ಮಾಡಿದ್ದವು. ಅದಾದ ಬಳಿಕ ವಸ್ತುಸಂಗ್ರಹಾಲಯದ ಸಮೀಪದಿಂದ ಮತ್ತೊಂದು ದೃಶ್ಯವು ವೈರಲ್ ಆಗಿತ್ತು. ಅದರಲ್ಲಿ ಈ ವ್ಯಕ್ತಿಯನ್ನು ಗುರುತಿಸಲಾಯಿತು. ಪೆರುಕಡ ಪೊಲೀಸರು ಆತನನ್ನು ನಿನ್ನೆ (ಮಂಗಳವಾರ) ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಇಂದು ಬೆಳಗ್ಗೆ ಪೊಲೀಸರು ವೈದ್ಯೆಯನ್ನು ಸ್ಟೇಷನ್ ಗೆ ಕರೆಸಿ ದಾಳಿಕೋರನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. 'ನನ್ನ ಮೇಲೆ ದಾಳಿ ಮಾಡಿದ ವ್ಯಕ್ತಿ ತಲೆ ಬೋಳಿಸಿಕೊಂಡಿದ್ದ. ಆತ ಧರಿಸಿದ್ದ ಶೂ ಮತ್ತು ಬಟ್ಟೆಯನ್ನು ನಾನು ಗುರುತಿಸಬಲ್ಲೆ. ದಾಳಿ ಮಾಡುವ ಮುಂಚೆ ಆತ ನನ್ನ ಮನೆಗೆ ಭೇಟಿ ನೀಡಿದ್ದ' ಎಂದು ಸಂತ್ರಸ್ತ ವೈದ್ಯೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಬೆಂಬಲಕ್ಕೆ ನಿಂತ ಮಾಧ್ಯಮಗಳು ಮತ್ತು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
ರಾಜ್ಯ ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಅವರು ಸಂತೋಷ್ ವ್ಯಯಕ್ತಿಕವಾಗಿ ನನ್ನೊಂದಿಗೆ ಮತ್ತು ಸರ್ಕಾರದೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಕಾರನ್ನು ಸಂತೋಷ್ ಅವರು ಚಲಾಯಿಸುತ್ತಿದ್ದರು ಎನ್ನುವುದಾದರೆ ಅವರ ಕಾರಿನ ಲಾಗ್ ಬುಕ್ ನ್ನು ಪರಿಶೀಲಿಸಿದಾಗ ಅದರ ಬಗ್ಗೆ ಮಾಹಿತಿ ಸಿಗಬಹುದು ಎಂದು ಅಗಸ್ಟಿನ್ ಅವರ ಖಾಸಗಿ ಕಾರ್ಯದರ್ಶಿ ಗೋಪಕುಮಾರ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನ ಹಿರಿಯ ಶಾಸಕ ರಮೇಶ್ ಚೆನ್ನಿತ್ತಲ್, ಸಚಿವರಾಗಲಿ ಅಥವಾ ಸರ್ಕಾರವಾಗಲಿ ಇದರ ಜವಾಬ್ದಾರಿಯನ್ನು ಹೊರಬೇಕು. ಈ ಕೃತ್ಯವನ್ನು ಎಸಗಿದವನು ಸಚಿವರ ಕಾರ್ಯಾಲಯಕ್ಕೆ ಸಂಬಂಧಿಸಿದ ವ್ಯಕ್ತಿಯಾಗಿರುವುದರಿಂದ ಅವರು ಕೂಡ ಇದಕ್ಕೆ ಪರೋಕ್ಷವಾಗಿ ಹೊಣೆಯಾಗುತ್ತಾರೆ. ಈ ಘಟನೆಯು ಕೇರಳದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬುದನ್ನು ತೋರಿಸುತ್ತದೆ ಮತ್ತು ಈ ಪ್ರಕರಣವನ್ನು ಭೇದಿಸಲು ತುಂಬಾ ಸಮಯ ತೆಗೆದುಕೊಳ್ಳುವುದು ಔಚಿತ್ಯವಲ್ಲ ಎಂದು ಚೆನ್ನಿತ್ತಲ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.