ತಿರುವನಂತಪುರಂ (ಕೇರಳ): ಸಾಕು ನಾಯಿಯನ್ನು ಕಟ್ಟಿಹಾಕಿ ದಾರುಣವಾಗಿ ಹೊಡೆದು ಸಾಯಿಸಿರುವ ಘಟನೆ ಕೇರಳದ ತಿರುವನಂತಪುರಂನ ವಿಜಿಂಜಮ್ನಲ್ಲಿ ನಡೆದಿದ್ದು, ಈ ಸಂಬಂಧ ಅಪ್ರಾಪ್ತ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಇಬ್ಬರನ್ನು ಶಿಲುವಾಯನ್ (20) ಮತ್ತು ಸುನಿಲ್ (22) ಎಂದು ಗುರುತಿಸಲಾಗಿದೆ. ಲ್ಯಾಬ್ರಡಾರ್ ರಿಟ್ರೈವರ್ ತಳಿಯ ಬ್ರೂನೋ ಎಂಬ ಶ್ವಾನವು ಎಂದಿನಂತೆ ಸಮುದ್ರ ತೀರದ ಬಳಿ ಹೋಗಿದ್ದು, ಬೋಟ್ ಸಮೀಪ ವಿಶ್ರಾಂತಿಗೆ ಕುಳಿತಿದೆ. ಇದನ್ನು ಕಂಡ ಮೂವರು ನಾಯಿಯನ್ನು ಬೋಟ್ನ ಹುಕ್ಕಿಗೆ ನೇತುಹಾಕಿ ದೊಣ್ಣೆಯಿಂದ ಅದನ್ನು ಮನಬಂದಂತೆ ಥಳಿಸಿದ್ದಾರೆ.
ಕೃತ್ಯದ ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆಹಿಡಿದವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶ್ವಾನದ ಮಾಲೀಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಒಬ್ಬನ ತಾಯಿಗೆ ಆ ನಾಯಿ ಕಚ್ಚಿತ್ತು, ಅದಕ್ಕಾಗಿ ಹೀಗೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ. ಈ ಹಿಂದೆಯೂ ನಾಯಿಗೆ ಹಗ್ಗೆ ಕಟ್ಟಿ ರಸ್ತೆಯಲ್ಲಿ ಅಮಾನವೀಯವಾಗಿ ಎಳೆದೊಯ್ದ ಪ್ರಕರಣ ಮತ್ತು ಆನೆಗೆ ಚಿತ್ರಹಿಂಸೆ ನೀಡಿ ಸಾಯಿಸಿದ ಕೇಸ್ ಕೇರಳದಲ್ಲಿ ಬೆಳಕಿಗೆ ಬಂದಿದ್ದವು. ದೇವರ ನಾಡಲ್ಲಿ ಇಂತಹ ರಾಕ್ಷಸಿ ಕೃತ್ಯಗಳು ಮುಂದುವರಿದಿರುವುದು ವಿಪರ್ಯಾಸ.