ಮಂಗಳೂರು: ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಆರೋಪಿಗೆ 12 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.10 ಲಕ್ಷ ರೂ. ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಪೊಕ್ಸೊ ನ್ಯಾಯಾಲಯ ಆದೇಶಿಸಿದೆ.
ಅಲ್ಲದೆ ಆತನ ಕೃತ್ಯಕ್ಕೆ ಸಹಕರಿಸಿದ ಮತ್ತೋರ್ವ ಆರೋಪಿಗೆ ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ನಗರದ ವಳಚ್ಚಿಲ್ ಪದವು ನಾಗನಾಗಿಣಿ ದೇವಸ್ಥಾನ ಬಳಿಯ ನಿವಾಸಿ ನಜೀರ್ (33) ಹಾಗೂ ವಳಚ್ಚಿಲ್ ಪದವು ಮಸೀದಿ ಹಿಂದುಗಡೆ ನಿವಾಸಿ ಶಮೀರ್ (29) ಶಿಕ್ಷೆಗೊಳಗಾದ ಆರೋಪಿಗಳು.
ಪ್ರಕರಣದ ವಿವರ:
ಅಪ್ರಾಪ್ತೆಯು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆಗೆ ನಗರದ ಮತ್ತೊಂದು ಕಾಲೇಜಿನ ವಿದ್ಯಾರ್ಥಿಯೋರ್ವನ ಪರಿಚಯವಿತ್ತು.
ಆಕೆ ಆತನೊಂದಿಗೆ 2019ರ ಫೆಬ್ರವರಿ 9ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಡ್ಯಾರ್ ಬಳಿಯ ನಿರ್ಜನ ಗುಡ್ಡವೊಂದರಲ್ಲಿ ಕುಳಿತು ಮಾತನಾಡುತ್ತಿದ್ದಳು.
ಸುಮಾರು 2 ಗಂಟೆ ಸುಮಾರಿಗೆ ಅಲ್ಲಿಗೆ ಬಂದ ಆರೋಪಿಗಳಿಬ್ಬರು ಅಪ್ರಾಪ್ತೆ ಹಾಗೂ ಆಕೆಯ ಸ್ನೇಹಿತನ ಫೋಟೋ, ವೀಡಿಯೋ ತೆಗೆದು ನೀವಿಬ್ಬರು ಅನ್ಯ ಧರ್ಮದವರು, ಈ ವೀಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ 20 ಸಾವಿರ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಇದರಿಂದ ಹೆದರಿದ ಇಬ್ಬರೂ 'ತಾವಿಬ್ಬರೂ ವಿದ್ಯಾರ್ಥಿಗಳು, ತಮ್ಮಲ್ಲಿ ಅಷ್ಟೊಂದು ಹಣವಿಲ್ಲ' ಎಂದು ವಿನಂತಿಸಿದ್ದಾರೆ. ಬಳಿಕ ಅಪ್ರಾಪ್ತೆಯ ಸ್ನೇಹಿತನ ಎಟಿಎಂ ಕಸಿದು, ಶಮೀರ್ ಹಣ ಡ್ರಾ ಮಾಡಲು ಹೋಗಿದ್ದಾನೆ.
ಕೆಲ ಹೊತ್ತಿನ ಬಳಿಕ ದೂರವಾಣಿ ಕರೆ ಮಾಡಿರುವ ಆತ 'ಹಣ ಡ್ರಾ ಮಾಡಲು ಆಗುತ್ತಿಲ್ಲ' ಎಂದಿದ್ದಾನೆ. ಆಗ ಆರೋಪಿ ನಜೀರ್ ಅಪ್ರಾಪ್ತೆಯ ಸ್ನೇಹಿತನನ್ನು ಹಣ ಡ್ರಾ ಮಾಡಲು ಕಳುಹಿಸಿದ್ದಾನೆ. ಆತ ಹೋದ ಬಳಿಕ ಅಪ್ರಾಪ್ತೆಯ ಬಳಿ ನಜೀರ್ ಅಥಾರಿಟಿ ಬರುತ್ತಾರೆ, ಅದಕ್ಕಿಂತ ಮೊದಲು ಮರೆಯಾಗಬೇಕು ಎಂದು ನಂಬಿಸಿ ಪೊದೆಯೊಂದರ ಬಳಿ ಕರೆದೊಯ್ದು, ಬಲತ್ಕಾರವಾಗಿ ಅತ್ಯಾಚಾರ ನಡೆಸಿದ್ದಾನೆ.
ಹಣ ಡ್ರಾ ಮಾಡಲು ಹೋದ ಆರೋಪಿ ಹಾಗೂ ಅಪ್ರಾಪ್ತೆಯ ಸ್ನೇಹಿತ ಬಂದ ಬಳಿಕ ಅತ್ಯಾಚಾರ ನಡೆಸಿರುವ ವಿಚಾರ ಬಯಲು ಮಾಡಿದರೆ ತಮ್ಮಿಬ್ಬರ ಫೋಟೋ ಹಾಗೂ ವೀಡಿಯೋವನ್ನು ವೈರಲ್ ಮಾಡುತ್ತೇವೆ, ಕೊಲೆ ಮಾಡುತ್ತೇವೆ ಎಂದು ಬೆದರಿಸಿ ಕಳುಹಿಸಿದ್ದಾರೆ.
ಇವರಿಬ್ಬರು ಈ ವಿಚಾರವನ್ನು ಯಾರಿಗೂ ಹೇಳದೆ ಮುಚ್ಚಿಟ್ಟಿದ್ದರು. ಆದರೆ ನಜೀರ್ ಹಣ ಕೊಡಬೇಕೆಂದು ಪದೇ ಪದೇ ಕರೆ ಮಾಡಿ ಪೀಡಿಸಿದ ಬಳಿಕ ಅಪ್ರಾಪ್ತೆ 2019 ಫೆಬ್ರವರಿ 18 ರಂದು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿ ಅಂದಿನ ಮಹಿಳಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಕಲಾವತಿ ದೋಷಾರೋಪಣ ಪಟ್ಟಿ ಸಲ್ಲಿಸುತ್ತಾರೆ.
ಪ್ರಕರಣವನ್ನು ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಸ್ಟಿ, ಎಸ್ ಸಿ 1 (ಪೊಕ್ಸೊ ನ್ಯಾಯಾಲಯ) ವಿಚಾರಣೆ ನಡೆಸಿ 15 ಸಾಕ್ಷಿಗಳು ಹಾಗೂ 29 ದಾಖಲೆಗಳನ್ನು ಪರಿಶೀಲನೆ ನಡೆಸಿ ಆರೋಪಿಗಳಿಬ್ಬರ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ಮಾಡಿದೆ.
ಈ ಬಗ್ಗೆ ತೀರ್ಪು ನೀಡಿರುವ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ. ಭಟ್ ಅವರು, ಮೊದಲ ಆರೋಪಿ ನಜೀರ್ ಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ರ ಆರೋಪದಲ್ಲಿ 12 ವರ್ಷ ಕಠಿಣ ಸಜೆ, 1.10 ಲಕ್ಷ ರೂ. ದಂಡ, ಐಪಿಸಿ ಸೆಕ್ಷನ್ 506(ಕೊಲೆ ಬೆದರಿಕೆ) ರ ಆರೋಪದಲ್ಲಿ 6 ತಿಂಗಳು ಕಠಿಣ ಸಜೆ, 3 ಸಾವಿರ ರೂ.ದಂಡ, ಐಪಿಸಿ ಸೆಕ್ಷನ್ 383(ಹಣ ಲೂಟಿ)ರ ಆರೋಪದಲ್ಲಿ 6 ತಿಂಗಳು ಕಠಿಣ ಸಜೆ, 3 ಸಾವಿರ ರೂ. ದಂಡ.
ಎರಡನೇ ಆರೋಪಿ ಶಮೀರ್ ಗೆ
ಐಪಿಸಿ ಸೆಕ್ಷನ್ 383(ಹಣ ಲೂಟಿ)ರ ಆರೋಪದಲ್ಲಿ 6 ತಿಂಗಳು ಕಠಿಣ ಸಜೆ, 3 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಹಣದಲ್ಲಿ ಒಂದು ಲಕ್ಷ ರೂ. ಹಣವನ್ನು ಅಪ್ರಾಪ್ತೆಗೆ ನೀಡಬೇಕು. ಜೊತೆಗೆ ಕಾನೂನು ಪ್ರಾಧಿಕಾರದಿಂದ 2 ಲಕ್ಷ ರೂ. ಹಣವನ್ನು ನೀಡಬೇಕೆಂದು ಆದೇಶಿಸಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ವಾದಿಸಿದ್ದಾರೆ.