ವಿಲ್ಲುಪುರಂ (ತಮಿಳುನಾಡು): ದೇಶದ ಅನೇಕ ಗ್ರಾಮಗಳಲ್ಲಿ ಇನ್ನೂ ಕೂಡ ನ್ಯಾಯ ಪಂಚಾಯಿತಿ ವ್ಯವಸ್ಥೆ ಜಾರಿಯಲ್ಲಿದೆ. ಈ ವ್ಯವಸ್ಥೆಯಲ್ಲಿ ಗ್ರಾಮದ ವ್ಯಾಪ್ತಿಯಲ್ಲಿ ಏನೇ ಅಹಿತಕರ ಘಟನೆಗಳು ನಡೆದರೂ ಊರಿನ ಮುಖಂಡನೆ ಪಂಚಾಯಿತಿ ಕರೆದು ಎಲ್ಲ ಜನರ ಸಮ್ಮುಖದಲ್ಲಿ ನ್ಯಾಯ ಹೇಳುತ್ತಾನೆ, ಶಿಕ್ಷೆ ವಿಧಿಸುತ್ತಾನೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿಯೂ ಇಂತಹ ನ್ಯಾಯ ಪಂಚಾಯಿತಿ ವ್ಯವಸ್ಥೆ ಜಾರಿಯಲ್ಲಿದ್ದು, ಒಟ್ಟಾನೇಂಧಲ್ ಎಂಬ ಗ್ರಾಮದಲ್ಲಿ ಮೂವರು ವೃದ್ಧ ದಲಿತರಿಗೆ ಪಂಚಾಯತ್ ಸದಸ್ಯರ ಕಾಲಿಗೆ ಬಿದ್ದು ಕ್ಷಮೆ ಕೇಳಲು ಸೂಚಿಸಲಾಗಿದೆ. ಹೀಗೆ ದಲಿತರು ಪಂಚಾಯತ್ ಸದಸ್ಯರ ಪಾದ ಮುಟ್ಟಿ ಕ್ಷಮೆ ಕೇಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಪ್ಪಿತಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ
ಕೋವಿಡ್ ಲಾಕ್ಡೌನ್ ನಡುವೆಯೂ ನಿಯಮ ಉಲ್ಲಂಘಿಸಿ ಒಟ್ಟಾನೇಂಧ ಗ್ರಾಮದಲ್ಲಿ ದೇವಾಲಯ ಉತ್ಸವ ಆಯೋಜಿಸಲಾಗಿತ್ತು. ಮಾಹಿತಿ ಮೇರೆಗೆ ಹಳ್ಳಿಗೆ ಬಂದ ಪೊಲೀಸರು, ಉತ್ಸವವನ್ನು ನಿಲ್ಲಿಸಿದ್ದರು. ಪೊಲೀಸರಿಗೆ ಮಾಹಿತಿ ನೀಡಿದ್ದು ಗ್ರಾಮದ ದಲಿತ ಯುವಕರು ಎಂದು ಗ್ರಾಮದ ಮೇಲ್ವರ್ಗದ ಗುಂಪೊಂದು ಜಗಳವಾಡಿದೆ. ಕೊನೆಗೆ ದಲಿತರು ತಪ್ಪೊಪ್ಪಿಕೊಂಡಿದ್ದು, ತಪ್ಪಿಗೆ ಶಿಕ್ಷೆಯಾಗಿ ಪಂಚಾಯಿತಿಯಲ್ಲಿ ಮೂವರು ಹಿರಿಯ ದಲಿತರನ್ನು ಪಂಚಾಯತ್ ಸದಸ್ಯರು ಕಾಲಿಗೆ ಬೀಳಿಸಿಕೊಂಡಿದ್ದರು.