ಕೊಳ್ಳೇಗಾಲ (ಚಾಮರಾಜನಗರ): ಸೋಮವಾರ ತಡ ರಾತ್ರಿ ಭಾರಿ ಪ್ರಮಾಣದ ಶಬ್ದದಿಂದ ಸುಮಾರು 10 ರಿಂದ 11 ಮನೆಗಳಿಗೆ ಹಾನಿಯಾಗಿರುವ ಘಟನೆ ತಾಲೂಕಿನ ಸಿಂಗಲ್ಲನೂರು ಗ್ರಾಮದಲ್ಲಿ ನಡೆದಿದೆ.
ಸೋಮವಾರ ಮಧ್ಯರಾತ್ರಿ 2.30ರ ಸುಮಾರಿಗೆ ಕೇಳಿ ಬಂದ ಶಬ್ದ ಜನರ ನಿದ್ದೆಗೆಡಿಸಿದೆ. ಪರಿಣಾಮ ನಿದ್ದೆಯಲ್ಲಿದ್ದ ಜನರೆಲ್ಲರೂ ಮನೆಯಿಂದ ಹೊರ ಬಂದಿದ್ದಾರೆ. ಮಹದೇವಮ್ಮ, ಶೈಲಪ್ಪ, ಸೋಮಣ್ಣ, ಸಿದ್ದರಾಜು, ಸುರೇಶ್ ಸೇರಿದಂತೆ ಹಲವರ ಮನೆಗಳು ಹಾನಿಗೊಳಗಾಗಿವೆ. ಈ ಪೈಕಿ ಸಿದ್ದರಾಜು ಎಂಬುವರ ಮನೆಯು ಸಂಪೂರ್ಣ ಜಖಂಗೊಂಡಿದೆ.
ಸಿದ್ದರಾಜು ಮನೆಯಲ್ಲಿ ವಾಸವಿದ್ದ ರತ್ಮಮ್ಮ ಎಂಬುವರಿಗೆ ಕೈಗೆ ಪೆಟ್ಟಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಚಾರ ತಿಳಿದ ಶಾಸಕ ಆರ್.ನರೇಂದ್ರ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹಾನಿಗೊಳಗಾದ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅವಘಡಕ್ಕೆ ಕಾರಣ ಏನು ಎಂಬುದರ ವರದಿಯನ್ನು ತ್ವರಿತವಾಗಿ ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಹಶೀಲ್ದಾರ್ ಕುನಾಲ್, ಇಒ ಮಹೇಶ್, ಡಿವೈಎಸ್ಪಿ ಜಿ.ನಾಗರಾಜು ಅವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳವನ್ನು ಸಾರ್ವಜನಿಕರು ಪ್ರವೇಶಿಸದಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಜೂಜಾಡುತ್ತಿದ್ದ ಎಎಸ್ಐ, ಕಾನ್ಸ್‌ಟೇಬಲ್, ತಹಶೀಲ್ದಾರ್ ಚಾಲಕ ಅರೆಸ್ಟ್