ಮೆಡ್ಚಲ್(ತೆಲಂಗಾಣ): ವೈದ್ಯರು ಹೊರಗಡೆ ಹೋಗಿದ್ದಾಗ ಇಬ್ಬರು ನರ್ಸ್‌ಗಳು ಗರ್ಭಿಣಿಗೆ ಹೆರಿಗೆ ಮಾಡಿಸಿದ ಹಿನ್ನೆಲೆಯಲ್ಲಿ ಶಿಶು ಮೃತಪಟ್ಟಿರುವ ಘಟನೆ ತೆಲಂಗಾಣದ ಮೆಡ್ಚಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಜೀಡಿಮೆಟ್ಲಾ ಲಯನ್ಸ್ ಕ್ಲಬ್ ಆಸ್ಪತ್ರೆಗೆ ಭಾರ್ಗವಿ ಎಂಬ ಮಹಿಳೆ ಶುಕ್ರವಾರ ಸಂಜೆ ಹೆರಿಗಾಗಿ ದಾಖಲಾಗಿದ್ದರು. ಸಂಜೆ 7 ಗಂಟೆ ಸುಮಾರಿಗೆ ವೈದ್ಯರು ಹೊರಗಡೆ ಹೋಗಿದ್ದರು. ಇದೇ ವೇಳೆ ಇಬ್ಬರು ನರ್ಸ್‌ಗಳು ಭಾರ್ಗವಿಗೆ ನಾರ್ಮಲ್ ಹೆರಿಗೆ ಮಾಡಿಸಿದ್ದಾರೆ. ಸರಿಯಾಗಿ ಹೆರಿಗೆ ಮಾಡಿಸದ ಕಾರಣ ಹೊಟ್ಟೆಯಲ್ಲಿದ್ದ ಹೆಣ್ಣು ಮಗು ಮೃತಪಟ್ಟಿರುವ ಆರೋಪ ಕೇಳಿಬಂದಿದೆ.
ಮಗು ಉಸಿರಾಡುತ್ತಿಲ್ಲ. ಆದ್ದರಿಂದ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಭಾರ್ಗವಿ ಕುಟುಂಬಕ್ಕೆ ನರ್ಸ್‌ಗಳು ತಿಳಿಸಿದ್ದಾರೆ. ಮಗುವನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದ ನಂತರ ಅಲ್ಲಿನ ವೈದ್ಯರು ಮಗು ಈಗಾಗಲೇ ಸಾವನ್ನಪ್ಪಿದೆ ಎಂಬುದನ್ನು ಖಚಿತಪಡಿಸಿದ್ದಾರೆ.
ನನ್ನ ಪತ್ನಿ ಭಾರ್ಗವಿಯನ್ನ ಲಯನ್ಸ್ ಕ್ಲಬ್ ಹಾಸ್ಪಿಟಲ್‌ಗೆ ಶುಕ್ರವಾರ ಸಂಜೆ ದಾಖಲಿಸಲಾಗಿತ್ತು. ಸಂಜೆ 7 ಗಂಟೆಯವರೆಗೆ ವೈದ್ಯರಿದ್ದರು. ಆ ನಂತರ ವೈದ್ಯರು ಹೊರಗೆ ಹೋಗಿದ್ದಾರೆ. ಆ ಸಮಯದಲ್ಲಿ ಜ್ಯೋತ್ಸ್ನಾ ಮತ್ತು ರಾಣಿ ಎಂಬ ನರ್ಸ್‌ಗಳು ಪತ್ನಿ ಇದ್ದ ಕೊಠಡಿಯಿಂದ ಆಪರೇಷನ್ ಥಿಯೇಟರ್‌ಗೆ ಕರೆದೊಯ್ದರು.
ನಾರ್ಮಲ್ ಡೆಲಿವರಿ ಮಾಡಿದ ನಂತರ ನಮ್ಮ ಬಳಿ ಮಗು ತಂದು ಉಸಿರಾಡುತ್ತಿಲ್ಲವೆಂದು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು. ಕೂಡಲೇ ಮಗುವನ್ನು ಬೇರೆಡೆಗೆ ತೆಗೆದುಕೊಂಡು ಹೋದೆವು. ಅಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿ ಮಗು ಈಗಾಗಲೇ ಸಾವನ್ನಪ್ಪಿದೆ ಎಂದು ದೃಢಪಡಿಸಿದ್ದಾರೆ ಎಂದು ಭಾರ್ಗವಿ ಪತಿ ಜಗದೀಶ್ ಹೇಳಿದ್ದಾರೆ.
ಜಗದೀಶ್ ಕುಟುಂಬ ಸಮೇತ ಲಯನ್ಸ್ ಕ್ಲಬ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ತಮ್ಮ ಮಗುವಿನ ಸಾವಿಗೆ ಕಾರಣರಾದ ನರ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಸ್ಪತ್ರೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಯ ಆಡಳಿತ ಮಂಡಳಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ