ಶಿವಕಾಶಿ (ತಮಿಳುನಾಡು): ಅಕ್ರಮವಾಗಿ ಪಟಾಕಿಗಳನ್ನು ಉತ್ಪಾದಿಸುತ್ತಿದ್ದ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಶಿ ಬಳಿ ನಡೆದಿದೆ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ.
ಶಿವಕಾಶಿ ಸಮೀಪ ಥೈಯಿಲ್ಪಟ್ಟಿ ಆರ್ಟಿಸ್ಟ್ ಕಾಲೋನಿಯಲ್ಲಿ ಸೂರ್ಯ (25) ಎಂಬಾತ ಜನರನ್ನು ಬಳಸಿಕೊಂಡು ಅಕ್ರಮ ಪಟಾಕಿ ತಯಾರಿಕೆಯಲ್ಲಿ ತೊಡಗಿದ್ದ. ಆದರೆ ಈ ವೇಳೆ ಪಟಾಕಿ ಸ್ಫೋಟಿಸಿದ್ದು, ಬೆಂಕಿ ಅವಘಡಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಗಾಯಾಳುಗಳನ್ನು ಶಿವಕಾಶಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಟಾಕಿಗಳ ತಯಾರಿಕೆಯಲ್ಲಿ 'ಮಿನಿ ಜಪಾನ್' ಎಂದೇ ಪ್ರಸಿದ್ಧಿಯಾಗಿರುವ ಶಿವಕಾಶಿಯಲ್ಲಿ ಪದೇ ಪದೇ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ.