ಮಂಗಳೂರು: ಆರೋಪಿಗಳ ಜಾಗ್ವಾರ್ ಕಾರನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಡಿಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಓದಿ: ಮಧ್ಯರಾತ್ರಿ ಸಹಾಯಕ್ಕೆ ಬಂದ ವಕೀಲನನ್ನೇ ಅಪಹರಿಸಿದ ಪ್ರಕರಣ: ಐವರು ಆರೋಪಿಗಳ ಬಂಧನ
ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್ಐ ಆಗಿರುವ, ಮಂಗಳೂರಿನಲ್ಲಿ ಹಿಂದೆ ಸಿಸಿಬಿ ಎಸ್ಐ ಆಗಿದ್ದ ಕಬ್ಬಾಳ್ ರಾಜ್ ಮತ್ತು ಮಂಗಳೂರಿನ ನಾರ್ಕೊಟಿಕ್ ಠಾಣಾ ಇನ್ಸ್ಪೆಕ್ಟರ್ ರಾಮಕೃಷ್ಣ ಅಮಾನತುಗೊಂಡವರು. ಕಬ್ಬಾಳ್ ರಾಜ್ ಅವರು ಇತ್ತೀಚೆಗೆ ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದರು.
ಮಂಗಳೂರಿನಲ್ಲಿ ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಜಾಗ್ವಾರ್ ಕಾರನ್ನು, ಮಂಗಳೂರು ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳ್ ರಾಜ್ ಮತ್ತು ಇತರರು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಬಳಿಕ ಎಡಿಜಿಪಿ ಪ್ರತಾಪ್ ರೆಡ್ಡಿ, ಮಂಗಳೂರು ಪೊಲೀಸ್ ಕಮೀಷನರ್ ಅವರಲ್ಲಿ ತನಿಖೆ ಮಾಡಿ ವರದಿ ನೀಡಲು ಸೂಚಿಸಿದ್ದರು.
ಅವರು ವರದಿ ನೀಡಿದ ಬಳಿಕ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿತ್ತು. ಸಿಐಡಿ ಅಧಿಕಾರಿಗಳು ನೀಡಿದ ವರದಿಯ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.