ಬೆಂಗಳೂರು: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದರೆ, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಹೊಸೂರು ಸಮೀಪದ ಏರ್‌ಪೋರ್ಟ್ ರಸ್ತೆಯಲ್ಲಿ ಇಂದು ರಾತ್ರಿ 9.30ರಲ್ಲಿ ಅಪಘಾತ ಸಂಭವಿಸಿದೆ. ವಿಮಾನ ನಿಲ್ದಾಣ ಕಡೆಯಿಂದ ಬರುತ್ತಿದ್ದ ಎಕ್ಸ್‌ಯುವಿ-500 ಕಾರು ಅತಿ ವೇಗವಾಗಿ ಬಂದು ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ (ಕ್ಯಾಬ್) ಗುದ್ದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ಪಲ್ಟಿಯಾಗಿದೆ.
ಅಪಘಾತ ಹಿನ್ನೆಲೆಯಲ್ಲಿ ಇತರ ವಾಹನಗಳ ಚಾಲಕರು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿ ಬೇರೆ ಬೇರೆ ವಾಹನಗಳಲ್ಲಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕ್ಯಾಬ್‌ನಲ್ಲಿ ಸಿಲುಕಿದವರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಕೊನೆಗೆ ಗ್ಯಾಸ್ ಕಟರ್ ಮತ್ತು ಕ್ರೈನ್ ಬಳಸಿ ಕಾರನ್ನು ಮೇಲೆ ಎತ್ತಿ ಒಳಗಿದ್ದವರನ್ನು ಹೊರತೆಗೆಯಲಾಗಿದೆ. ಕ್ಯಾಬ್‌ನಲ್ಲಿ ಇದ್ದ ಇಬ್ಬರು ಮಹಿಳೆಯರು ಮತ್ತು ಚಾಲಕ ಅಸುನೀಗಿದ್ದಾರೆ. ಕೋಲ್ಕತ್ತಾ ಮೂಲದ ಪೂರ್ಣಿಮಾ (63) ಅವರ ಮಗಳು ಲಕ್ಷ್ಮಿ ರವಿಂದ್ರನ್ (38) ಮತ್ತು ಕಾರಿನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮತ್ತೊಂದು ಕಾರಿನಲ್ಲಿದ್ದ ಇಬ್ಬರನ್ನು ಸಾರ್ವಜನಿಕರು ರಕ್ಷಣೆ ಮಾಡಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರು ಮತ್ತು ಗಾಯಾಳುಗಳ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆ ಅಪಘಾತದಿಂದ ಕೆಲಕಾಲ ಏರ್‌ಪೋರ್ಟ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಭಾರಿ ಮಳೆ ಮುನ್ಸೂಚನೆ; ರಾಜ್ಯದ 7 ಜಿಲ್ಲೆಗಳಲ್ಲಿ ಇಂದು, ನಾಳೆ ಶಾಲಾ-ಕಾಲೇಜುಗಳಿಗೆ ರಜೆ