ತಿರುವನಂತಪುರಂ (ಕೇರಳ): ಪತಿ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ಕೇರಳದ ಯುವತಿ ಮೃತಪಟ್ಟ ಘಟನೆ ನಡೆದ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಪ್ರಕರಣ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ವರ್ಷದ ಹಿಂದೆ ವಿವಾಹವಾಗಿದ್ದ 24 ವರ್ಷದ ಯುವತಿ ಬಾಡಿಗೆ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಜೀವ ಬಿಟ್ಟಿದ್ದಾಳೆ.
ಮೃತಳನ್ನು ಕೇರಳದ ತಿರುವನಂತಪುರಂನ ವಿಜಿಂಜಮ್ ನಿವಾಸಿ ಅರ್ಚನಾ (24) ಎಂದು ಗುರುತಿಸಲಾಗಿದೆ. ಕಳೆದ ವರ್ಷದ ಚಿರತ್ತಲಾವಿಲಕಂ ಮೂಲದ ಸುರೇಶ್ ಎಂಬವರೊಂದಿಗೆ ಅರ್ಚನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಬೇರೆ ಬೇರೆ ಧರ್ಮದವರಾಗಿದ್ದಾರೆ. ಪತಿಯೊಂದಿಗೆ ವಿಜಿಂಜಮ್ನಲ್ಲಿ ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ: ಇದು ನನ್ನ ಕೊನೆ ಫೇಸ್ಬುಕ್ ಪೋಸ್ಟ್... ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 24ರ ಯುವತಿ
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಅರ್ಚನಾ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ಬೆಳಗ್ಗೆಯಷ್ಟೇ ಕೇರಳದ ಕೊಲ್ಲಂನಲ್ಲಿ ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ 24 ವರ್ಷದ ವಿವಾಹಿತ ಮಹಿಳೆಯೊಬ್ಬರು ನೇಣಿಗೆ ಶರಣಾಗಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.