ತುಮಕೂರು: ತಮಿಳುನಾಡಿನ ಮಧುರೈನಿಂದ ಪತ್ರಕರ್ತನ ಸೋಗಿನಲ್ಲಿ ಕಾಲ್ ಗರ್ಲ್ಸ್‌ಗಳೊಂದಿಗೆ ಬರುತ್ತಿದ್ದ ಕಳ್ಳನೊಬ್ಬ ಕಾರುಗಳನ್ನು ವ್ಯವಸ್ಥಿತವಾಗಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದವನನ್ನು ಪತ್ತೆ ಹಚ್ಚಿರುವ ತುಮಕೂರು ಪೊಲೀಸರು, ಆರೋಪಿಯಿಂದ ಸುಮಾರು 50 ಲಕ್ಷ ರೂ. ಮೌಲ್ಯದ 7 ಕಾರುಗಳು ಹಾಗೂ 2.5 ಲಕ್ಷ ರೂಪಾಯಿ ಹಣ ವಶಪಡಿಸಿಕೊಂಡಿದ್ದಾರೆ.
ಮಧುರೈನ ಕುರಿಂಜಿ ನಗರ್ ವಿಧಿಯಲ್ಲಿ ವಾಸಿಸುತ್ತಿದ್ದ ಪರಮೇಶ್ವರನ್ ಹಾಗೂ ಕೊಯಮತ್ತೂರಿನ ಸೆಲ್ವಪುರಂ ಬಡಾವಣೆಯ ರಾಮಮೂರ್ತಿ ರಸ್ತೆಯ ಹಕೀಂ ಬಾಷಾ ಬಂಧಿತ ಆರೋಪಿಗಳಾಗಿದ್ದು, ಇವರ ಬಳಿ ಇದ್ದ 4 ಬ್ರಿಜ್ಜಾ , 3 ಸ್ವಿಫ್ಟ್ ಕಾರುಗಳನ್ನು ದಸ್ತಗಿರಿ ಮಾಡಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಪರಮೇಶ್ವರನ್, ಪೊಲೀಸರಿಂದ ತಪ್ಪಿಸಿಕೊಳ್ಳಲು ತಾನು ಕಳ್ಳತನ ಮಾಡುವ ಕಾರುಗಳಿಗೆ ಪ್ರೆಸ್ ಎಂಬ ಸ್ಟಿಕ್ಕರ್ ಅಂಟಿಸಿ ಪತ್ರಿಕೆಯೊಂದರ ಗುರುತಿನ ಚೀಟಿಯನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಕಳ್ಳತನಕ್ಕೆ ಬರುವಾಗ ಕಾಲ್ ಗರ್ಲ್ಸ್ ಹೆಣ್ಣುಮಕ್ಕಳನ್ನು ತನ್ನೊಂದಿಗೆ ಕಾರಿನಲ್ಲಿ ಕರೆದುಕೊಂಡು ಬಂದು ಕೃತ್ಯ ಮಾಡಿಕೊಂಡು ವಾಪಸ್ ಹೋಗುವಾಗ ಟೋಲ್ ಗೇಟ್‌ಗಳಲ್ಲಿ ಗುರುತಿನ ಚೀಟಿ ತೋರಿಸುತ್ತಿದ್ದ.
ಜೊತೆಗೆ ಹೆಣ್ಣುಮಕ್ಕಳನ್ನು ತನ್ನೊಂದಿಗೆ ಇಟ್ಟುಕೊಂಡು ತಾನೊಬ್ಬ ಸಂಸಾರಸ್ಥನೆಂದು ಬಿಂಬಿಸುವ ರೀತಿಯಲ್ಲಿ ವರ್ತಿಸಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದನು.
ಮನೆ ಮುಂದೆ ನಿಲ್ಲಿಸುತ್ತಿದ್ದ ಕಾರು ಕ್ಷಣಮಾತ್ರದಲ್ಲೇ ಎಗರಿಸುತ್ತಿದ್ದ!
ಆರೋಪಿ ಪರಮೇಶ್ವರನ್ ಬಳಿ ಡ್ರಿಲ್ಲಿಂಗ್ ಮಷಿನ್, ಕಾರು ಕೀಗಳ ಸಾಫ್ಟ್‌ವೇರ್, ನಕಲು ಮಾಡಲು ಉಪಯೋಗಿಸುವ ಸಣ್ಣ ಚಿಪ್‌ಗಳು, ಕಾರಿನ ನಕಲಿ ಬ್ಲಾಂಕ್ ಕೀಗಳು, ಗ್ಲಾಸ್ ಬ್ರೋಕರ್, ಕಾರಿನ ನಕಲಿ ನಂಬರ್ ಪ್ಲೇಟ್‌ಗಳು, ಪ್ರೆಸ್ ಐಡಿ ಕಾರ್ಡ್, ಪ್ರೆಸ್ ಎಂಬ ಹೆಸರಿನ ಸ್ಟಿಕ್ಕರ್, ಲಾಯರ್ ಸಿಂಬಲ್ ಸ್ಟಿಕ್ಕರ್‌ಗಳನ್ನು ಇಟ್ಟುಕೊಳ್ಳುತ್ತಿದ್ದ. ರಾತ್ರಿ ವೇಳೆಯಲ್ಲಿ ಮನೆ ಮುಂದೆ ನಿಂತಿರುವ ಕಾರುಗಳ ಕಿಟಕಿ ಗಾಜುಗಳನ್ನು ತನ್ನ ಬಳಿಯಿದ್ದ ಆಯುಧಗಳಿಂದ ಹೊಡೆದು ಕಾರಿನ ಸೆಂಟ್ರಲ್ ಲಾಕ್ ಸಿಸ್ಟಮ್ ಮತ್ತು ಕಾರಿನ ಅಲಾರಾಂ ನಿಷ್ಕ್ರಿಯಗೊಳಿಸುತ್ತಿದ್ದ.
ಬಳಿಕ ತನ್ನ ಬಳಿ ಇರುವ ಕಾರಿನ ಕೀಗಳ ಸಾಫ್ಟ್‌ವೇರ್ ನಕಲು ಮಾಡಲು ಉಪಯೋಗಿಸುವ ಸಣ್ಣ ಚಿಪ್‌ಗಳನ್ನು ಹಾಕುತ್ತಿದ್ದ. ನಕಲಿ ಕೀ ಬಳಸಿ ಕಾರುಗಳನ್ನು ಕೆಲವೇ ನಿಮಿಷಗಳಲ್ಲಿ ಕಳವು ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿ ವಿರುದ್ಧ ಈಗಾಗಲೇ 26 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಠಾಣೆ, ಚಿಕ್ಕಬಳ್ಳಾಪುರ ನಗರ, ಕೋಲಾರ ಗ್ರಾಮಾಂತರ ಠಾಣೆ, ತಿರುವನಂತಪುರಂ ಹಾಗೂ ತಮಿಳುನಾಡಿನಲ್ಲಿ 11 ಪ್ರಕರಣಗಳು ದಾಖಲಾಗಿವೆ.
ಆರೋಪಿ ಹಕೀಂ ಬಾಷಾ ರೌಡಿ ಶೀಟರ್!
ಆರೋಪಿ ಹಕೀಂ ಬಾಷಾ ಹಾಗೂ ಪರಮೇಶ್ವರನ್ ಇಬ್ಬರು ಹಳೆ ಕಾರುಗಳ ಮಾರಾಟಗಾರರಾಗಿದ್ದಾರೆ. ಹಕೀಂ ಬಾಷಾಗೆ ಪರಮೇಶ್ವರನ್ ತಾನು ಕದ್ದ ಕಾರುಗಳನ್ನು ಮಾರಾಟ ಮಾಡುತ್ತಿದ್ದನು. ಹಕೀಂ ತಮಿಳುನಾಡಿನ ಸೆಲ್ವಂ ಪುರಂ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಅಲ್ಲದೇ ಈತನ ಮೇಲೆ ಸೆಲ್ವಪುರಂ ಮತ್ತು ಕೊಯಮತ್ತೂರಿನಲ್ಲಿ ಮೋಸ ವಂಚನೆ ಪ್ರಕರಣಗಳು ದಾಖಲಾಗಿದೆ.
ತುಮಕೂರು ನಗರದಲ್ಲಿರುವ ಪೊಲೀಸ್ ಠಾಣೆಗಳಾದ ಕ್ಯಾತ್ಸಂದ್ರ, ಜಯನಗರ ಹಾಗೂ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣಗಳು, ಗೋವಾ ರಾಜ್ಯದ ಪೋರ ವೀರಂ ಪೊಲೀಸ್ ಠಾಣೆಯಲ್ಲಿ 2, ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಎರಡು, ಮಂಡಿ ಪೊಲೀಸ್ ಠಾಣೆಯಲ್ಲಿ ಒಂದು ಹಾಗೂ ತಮಿಳುನಾಡಿನ ನೀಲಾಂಜರಿ ಪೊಲೀಸ್ ಠಾಣೆಯಲ್ಲಿ ಒಂದು ಕಾರು ಕಳವು ಪ್ರಕರಣಗಳು ದಾಖಲಾಗಿವೆ.