ಗಾಜೀಪುರ(ಉತ್ತರ ಪ್ರದೇಶ): ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಗುಡಿಸಲಿಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ಸಂಭವಿಸಿದೆ.
ದುರಂತದಲ್ಲಿ ಹಲವರು ಗಾಯಗೊಂಡಿದ್ದು, ಕೂಡಲೇ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅಹಿರೋಲಿ ಗ್ರಾಮದ ಗುಡಿಸಲ್ಲಿನಲ್ಲಿದ್ದ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಶವಗಳನ್ನು ರಸ್ತೆಯಲ್ಲಿ ಇಟ್ಟು ಕೆಲಕಾಲ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಸ್ಥರು ಪ್ರಸ್ತಾಪಿಸಿದ ಪರಿಹಾರ ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಇಂದು ಬೆಳಗ್ಗೆ 7 ಗಂಟೆಗೆ ಅಹಿರೋಲಿ ಚಟ್ಟಿ ಬಳಿ ವೇಗವಾಗಿ ಬಂದ ಟ್ರಕ್ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಇದ್ದ ಗುಡಿಸಲಿಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಶವಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.