ದೇವನಹಳ್ಳಿ : ಎರಡು ವಿಮಾನಗಳು ಒಂದೇ ಸಮಯದಲ್ಲಿ ಟೇಕ್ ಆಫ್ ಆಗುವ ಸಮಯದಲ್ಲಿ ಎರಡೂ ಮುಖಾಮುಖಿಯಾಗಿ ಸಲ್ಪದರಲ್ಲೇ ಭಾರಿ ಅನಾಹುತ ತಪ್ಪಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ. ಜನವರಿ 7 ರ ಬೆಳಗ್ಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಂಡಿಗೋ ಏರ್‌ಲೈನ್ಸ್‌ಗೆ ಸೇರಿದ 6E455 ಮತ್ತು 6E246 ಸಂಖ್ಯೆಯ ಭುವನೇಶ್ವರ ಮತ್ತು ಕೋಲ್ಕತ್ತಾಗೆ ತೆರಳುತ್ತಿದ್ದ ಎರಡು ವಿಮಾನಗಳ ನಡುವೆ ನಡಯಬೇಕಿದ್ದ ಅನಾಹುತ ಕೂದಲೆಳೆ ಅತಂತರದಲ್ಲಿ ತಪ್ಪಿ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಎರಡೂ ವಿಮಾನಗಳಲ್ಲಿ ಒಟ್ಟು 400 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ.
ಎರಡು ವಿಮಾನಗಳು ಏಕಕಾಲದಲ್ಲಿ ಟೇಕ್ ಆಫ್ ಆಗುವಾಗ ಪರಸ್ಪರ ಡಿಕ್ಕಿ ಹೊಡೆಯುವ ಸನಿಹಕ್ಕೆ ಬಂದಿದ್ದವು. ಈ ಸಮಯದಲ್ಲಿ ತಕ್ಷಣವೇ ಗಮನಿಸಿದ ರಡಾರ್ ಕಂಟ್ರೋಲ್ ರೂಮ್ ನವರು ಒಂದು ವಿಮಾನವನ್ನು ಬಲಕ್ಕೆ ಮತ್ತು ಮತ್ತೊಂದು ವಿಮಾನವನ್ನು ಎಡಕ್ಕೆ ಹೋಗುವಂತೆ ಸೂಚನೆ ನೀಡಿದ್ದಾರೆ. ಇದೇ ಸಮಯದಲ್ಲಿ ಬೇರೆ ವಿಮಾನಗಳು ಲ್ಯಾಂಡಿಂಗ್ ಆಗದೆ ಇದ್ದಿದ್ದು ಸಂಭವನೀಯ ಅನಾಹುತ ತಪ್ಪುವಂತೆ ಮಾಡಿದೆ.
ಅನಾಹುತ ಕುರಿತು ಹಿರಿಯ ಅಧಿಕಾರಿಗಳು ಕಾರಣ ಕೇಳಿದ್ದು, ಏರ್ ಪೋರ್ಟ್‌ನಲ್ಲಿ ಎರಡು ರನ್ ವೇ ಗಳಿದ್ದು ಇಂತಹ ಸಮಯದಲ್ಲಿ ಎರಡು ವಿಮಾನಗಳು ಒಂದೇ ರನ್ ವೇ ಬಳಸಿದ್ದು ಯಾಕೆಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಎಟಿಸಿಯಿಂದ ಟೇಕ್ ಆಫ್ ಅನುಮತಿ ಪಡೆಯದೆ ಸ್ಪೈಸ್‌ಜೆಟ್ ವಿಮಾನ ಹಾರಾಟ; ತನಿಖೆಗೆ ಆದೇಶ