ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ತಮ್ಮಡಿಹಳ್ಳಿ ಬಿಳೇಕಲ್ಲು ಗೊಲ್ಲರಹಟ್ಟಿಯ ಹೊಲದಲ್ಲಿ ರಾಗಿ ಕೊಯ್ಲು ಮಾಡುತ್ತಿದ್ದ ವೇಳೆ ಎರಡು ಹೆಬ್ಬಾವುಗಳು ಪ್ರತ್ಯಕ್ಷವಾಗಿ, ಅಲ್ಲಿದ್ದ ಜನರನ್ನು ಗಾಬರಿಗೊಳಿಸಿದ್ದವು.
ರಮೇಶ್ ಎಂಬುವರಿಗೆ ಸೇರಿದ ಹೊಲದಲ್ಲಿ ರಾಗಿ ಕೊಯ್ಲು ಮಾಡುತ್ತಿದ್ದ ವೇಳೆ ಒಂದು ಬೃಹತ್ ಗಾತ್ರದ ಮತ್ತು ಮತ್ತೊಂದು ಮಧ್ಯಮ ಗಾತ್ರದ ಹೆಬ್ಬಾವುಗಳನ್ನು ಕಂಡು ಸ್ಥಳದಲ್ಲಿದ್ದ ಮಹಿಳೆಯರು ಬೆಚ್ಚಿಬಿದ್ದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹೆಬ್ಬಾವುಗಳನ್ನು ಸೆರೆಹಿಡಿದಿದ್ದಾರೆ. ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನಯ್ಯ ಅವರ ಮಾರ್ಗದರ್ಶನದಲ್ಲಿ ಡಿಆರ್‍ಎಫ್ ಕಿರಣ್ ಕುಮಾರ್, ಅರಣ್ಯ ರಕ್ಷಕ ದಿಲೀಪ್ ಕುಮಾರ್ ಹಾಗೂ ಶೇಖರ್ ಹೆಬ್ಬಾವು ಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾದರು.
ಸಮೀಪದಲ್ಲೇ ಕುದುರೆ ಕಣಿವೆ ಅರಣ್ಯ ಪ್ರದೇಶವಿದ್ದು, ಹೆಬ್ಬಾವುಗಳು ರಾಗಿ ಹೊಲಕ್ಕೆ ಆಹಾರವನ್ನು ಅರಸಿ ಬಂದಿರಬಹುದೆಂದು ಅರಣ್ಯ ಇಲಾಖೆಯವರು ಶಂಕಿಸಿದ್ದಾರೆ. ಬಳಿಕ ಸೆರೆಸಿಕ್ಕ ಹೆಬ್ಬಾವುಗಳನ್ನು ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.