ತುಮಕೂರು: ಪತಿ-ಪತ್ನಿ ನಡುವೆ ಗಲಾಟೆ ನಡೆದು ಗಂಡ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ್ದಾನೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಕ್ಷಣೆಗೆ ಬಂದ ಪೊಲೀಸರಿಗೂ ಸುಟ್ಟ ಗಾಯಗಳಾಗಿವೆ.
ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮದ ಗೋವಿಂದಪ್ಪ ಮತ್ತು ಆತನ ಹೆಂಡತಿ ಜಗವಾಡುತ್ತಿದ್ದ ವಿಷಯ ತಿಳಿದು ಗ್ರಾಮಾಂತರ ಠಾಣೆ ಹೆಡ್ ಕಾನ್ಸ್ಟೇಬಲ್ ಗವಿರಂಗಪ್ಪ ಹಾಗೂ ಚಾಲಕ ಗುಳಿಗೆಪ್ಪ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಗೋವಿಂದಪ್ಪ ಮನೆಯ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ. ಕಿಟಕಿ ಮೂಲಕ ಆತನನ್ನು ಸಮಾಧಾನ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದರು.
ಆದರೆ, ಗೋವಿಂದಪ್ಪ ಮನೆಯೊಳಗೆ ಗ್ಯಾಸ್ ಸಿಲಿಂಡರ್ ತೆರೆದು ಕೈಯಲ್ಲಿದ್ದ ಗ್ಯಾಸ್ ಲೈಟರ್ ಆನ್ ಮಾಡಿದ್ದಾನೆ. ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಕಿಟಕಿ ಬಳಿ ನಿಂತಿದ್ದ ಪೊಲೀಸರ ಮುಖಕ್ಕೂ ಬೆಂಕಿ ತಗುಲಿ ಮುಖ ಹಾಗೂ ತಲೆಭಾಗಗಳಿಗೆ ಸುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ನಿರಂತರ ಮಳೆ: ಕ್ಷೇತ್ರ ಪ್ರದಕ್ಷಿಣೆ ಹಾಕಿದ ಶಾಸಕ ಅಭಯ್ ಪಾಟೀಲ್
ಬೆಂಕಿ ತಗುಲಿ ಬಹುತೇಕ ಸುಟ್ಟು ಹೋಗಿರುವ ಗೋವಿಂದಪ್ಪನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.