ತುಮಕೂರು: ನಿಯಮ ಮೀರಿ ನಗರದಲ್ಲಿ ಓಡಾಡುತ್ತಿರುವ ಓಲಾ, ಉಬರ್ ಹಾಗೂ ಟ್ಯಾಕ್ಸಿ ಚಾಲಕರಿಗೆ ದಂಡ ವಿಧಿಸಲಾಗುತ್ತಿದೆ. ಬೆಂಗಳೂರಿಗೆ ಸೀಮಿತವಾಗಿರುವ ಕ್ಯಾಂಪ್ಗಳು ಇದೀಗ ತುಮಕೂರಿನ ಟ್ಯಾಕ್ಸಿ ಚಾಲಕರನ್ನು ಪರದಾಡುವಂತೆ ಮಾಡಿದೆ. ನಿತ್ಯ ಬಾಡಿಗೆ ಇಲ್ಲದೆ ಟ್ಯಾಕ್ಸಿ ಸ್ಟಾಂಡ್‌ನಲ್ಲಿಯೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನ ಓಲಾ, ಉಬರ್ ಕಂಪನಿ ಕಾರುಗಳು ನಿತ್ಯವೂ ಸಂಚಾರ ಮಾಡುತ್ತಿರುವುದರಿಂದ ಸಾಕಷ್ಟು ಆರ್ಥಿಕ ದುಸ್ಥಿತಿಗೆ ಒಳಗಾಗಿರುವ ತುಮಕೂರಿನ ಕಾರು, ಟ್ಯಾಕ್ಸಿ ಚಾಲಕರು ಆರ್ಟಿಓ ಹಾಗೂ ಪೊಲೀಸರ ಮೊರೆ ಹೋಗಿದ್ದು, ನಿಯಮಾವಳಿ ಮೀರುತ್ತಿವುದನ್ನು ಗಮನಕ್ಕೆ ತರುತ್ತಿದ್ದಾರೆ. ಅಲ್ಲದೇ ದಂಡ ವಿಧಿಸಿ ತುಮಕೂರಿನಲ್ಲಿ ಟ್ಯಾಕ್ಸಿ ಓಡಿಸಿದಂತೆ ತಡೆಗಟ್ಟಲು ಹರಸಾಹಸ ಪಡುತ್ತಿದ್ದಾರೆ.
ಬಾಡಿಗೆ ವಾಹನಗಳನ್ನಿಟ್ಟುಕೊಂಡು ಜೀವನ ನಡೆಸುವವರು ಸಂಕಷ್ಟದಲ್ಲಿದ್ದಾರೆ. ಲಾಕ್ಡೌನ್ ನಂತರ ಬಾಡಿಗೆ ದುಡಿಮೆ ಇಲ್ಲದೇ ಜೀವನ ಸಾಗಿಸುವುದೇ ಕಷ್ಟ. ಇಂತಹ ಸಮಯದಲ್ಲಿ ತುಮಕೂರಿಗೆ ಬಂದು ಅತೀ ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಸರಿಯಲ್ಲ. ನಮ್ಮನ್ನು ಕೇಳುವವರೆ ಇಲ್ಲದಂತ ಪರಿಸ್ಥಿತಿ ಇದೆ ಎಂದು ಟ್ಯಾಕ್ಸಿ ಚಾಲಕರು ಅಳಲು ತೋಡಿಕೊಂಡಿದ್ದಾರೆ.
ಸದ್ಯ ತುಮಕೂರು ನಗರದಲ್ಲಿ ಓಲಾ, ಉಬರ್ ಹಾವಳಿಯನ್ನು ತಡೆಯಲು ಟ್ಯಾಕ್ಸಿ ಚಾಲಕರು ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದ ಸುಮಾರು 20ಕ್ಕೂ ಹೆಚ್ಚು ಓಲಾ, ಉಬರ್ ವಾಹನಗಳಿಗೆ ದಂಡ ವಿಧಿಸಲಾಗಿದೆ.