ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಸಮೀಪ ನಡೆದ ಖಾಸಗಿ ಬಸ್ ದುರಂತದಲ್ಲಿ ಕೂಲಿ ಕಾರ್ಮಿಕನೊಬ್ಬನ ಎಡಗೈ ತುಂಡಾಗಿದೆ. ಇದರ ಮರುಜೋಡಣೆಗಾಗಿ ಕಾರ್ಮಿಕ ರಾಜು ಎಂಬಾತನನ್ನು ಬೆಂಗಳೂರಿನ ಸಂಜಯ್ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಾರ್ಮಿಕ ರಾಜು ಗಾರೆ ಕೆಲಸಕ್ಕೆಂದು ಪಾವಗಡಕ್ಕೆ ತೆರಳುತ್ತಿದ್ದ ವೇಳೆ ಬಸ್ ದುರಂತದಲ್ಲಿ ತನ್ನ ಕೈ ಕಳೆದುಕೊಂಡಿದ್ದಾನೆ. ಇದೀಗ ರಾಜುಗೆ ಅಂಗವಿಕಲತೆಯ ಭಯ ಶುರುವಾಗಿದೆ. ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ವೇಳೆ ಇಲ್ಲಿ ತುಂಡಾಗಿರುವ ಕೈ ಜೋಡಣೆಗೆ ಪೂರಕವಾದ ಚಿಕಿತ್ಸಾ ಸೌಲಭ್ಯ ಇರದ ಕಾರಣ ಆತನನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ವೇಳೆ ಆತನ ತುಂಡಾದ ಕೈಯನ್ನು ಪ್ಲಾಸ್ಟಿಕ್ ಕವರಿನಲ್ಲಿ ಆತನ ಸಂಬಂಧಿಕರು ಜತನದಿಂದ ತೆಗೆದುಕೊಂಡು ಬೆಂಗಳೂರಿಗೆ ತೆರಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.