ತುಮಕೂರು: ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳೇ ನಿರ್ಲಕ್ಷ್ಯ ವಹಿಸುತ್ತಾರೆ. ಅಂತಹದರಲ್ಲಿ ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಕಾಯಕದಲ್ಲಿ ಅಪರೂಪದ ಶಿಕ್ಷಕ ದಂಪತಿ ತೊಡಗಿರುವುದು ಸಾಕಷ್ಟು ಶ್ಲಾಘನೆಗೆ ಪಾತ್ರವಾಗಿದೆ.
ಪುರವರ ಸರ್ಕಾರಿ ಪ್ರಾಥಮಿಕ ಶಾಲೆಯ ಫಣೀಂದ್ರ ನಾಥ್ ಮತ್ತು ಇಂದ್ರಮ್ಮ ಶಿಕ್ಷಕ ದಂಪತಿ, ಪ್ರತಿ ಶನಿವಾರ ಹಾಗೂ ಭಾನುವಾರ ಬಂತೆಂದರೆ ಸಾಕು ಮಧುಗಿರಿ-ಹಿಂದೂಪುರ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮಣ್ಣು, ಜಲ್ಲಿಗಳನ್ನು ಹಾಕಿ ಮುಚ್ಚುವ ಕಾರ್ಯದಲ್ಲಿ ತೊಡಗುತ್ತಾರೆ.
ಇತ್ತೀಚಿಗೆ ನಿವೃತ್ತ ಶಿಕ್ಷಕರೊಬ್ಬರು ರಸ್ತೆಯಲ್ಲಿದ್ದ ಗುಂಡಿಯಿಂದಾಗಿ ಅಪಘಾತ ಸಂಭವಿಸಿ ಮೃತಪಟ್ಟಿದ್ದು, ಅನೇಕ ಅಪಘಾತಗಳನ್ನು ಕಣ್ಣಾರೆ ಕಂಡಿದ್ದರಿಂದ ಈ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕರು ಇವರಿಗೆ ಕರೆ ಮಾಡಿದರೆ ತಕ್ಷಣ ಸ್ಥಳಕ್ಕೆ ಹೋಗಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ಈ ದಂಪತಿ ಮುಂದಾಗುತ್ತಾರೆ. ಇನ್ನು ಇವರ ಕಾರ್ಯಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.