ತುಮಕೂರು: ಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಎಲ್ಲಾ ದೇವಾಲಯಗಳಲ್ಲೂ ಬೆಳಗ್ಗೆಯಿಂದಲೇ ಅಭಿಷೇಕ, ವಿಶೇಷ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಿವರಾತ್ರಿ ಪ್ರಯುಕ್ತ ಶಿವನ ದೇವಾಲಯಗಳಲ್ಲಿ ಜನರು ಬೆಳಗ್ಗೆಯಿಂದಲೂ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದರು. ಲಿಂಗಕ್ಕೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಶಿವ ಪುರಾಣ ಸ್ತೋತ್ರಗಳನ್ನು ಪಠಿಸುವ ಮೂಲಕ ವಿಶೇಷ ಪೂಜೆ ಹಾಗೂ ಹೋಮ-ಹವನಗಳನ್ನು ನಡೆಸಲಾಯಿತು. ಶಿವನಿಗೆ ಬಿಲ್ವಪತ್ರೆ ಎಂದರೆ ಇಷ್ಟ. ಹಾಗಾಗಿ ಭಕ್ತರು ಬಿಲ್ವಪತ್ರೆಯನ್ನು ಶಿವನಿಗೆ ಸಮರ್ಪಿಸಿ ಆಯುರ್ ಆರೋಗ್ಯ ಐಶ್ವರ್ಯ ನೀಡಿ ಕಾಪಾಡಲಿ ಎಂದು ಬೇಡಿಕೊಳ್ಳುತ್ತಿದ್ದರು.
ಅದೇ ರೀತಿ ಚಿಕ್ಕಪೇಟೆಯಲ್ಲಿರುವ ನೀಲಕಂಠೇಶ್ವರ ದೇವಾಲಯ, ಭದ್ರಮ್ಮ ವೃತ್ತದಲ್ಲಿರುವ ಸೋಮೇಶ್ವರ ದೇವಾಲಯ, ಹೊರ ಪೇಟೆಯಲ್ಲಿರುವ ಕರಿ ಬಸವೇಶ್ವರ ದೇವಾಲಯ ಹಾಗೂ ನಗರದ ವಿವಿಧ ಶಿವನ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಅಲಂಕಾರ ಮಾಡಿ ಶಿವನನ್ನು ಪೂಜಿಸಲಾಯಿತು.