ತುಮಕೂರು : ಶಿವರಾತ್ರಿ ಹಿನ್ನೆಲೆ ವಿವಿಧ ಸ್ವರೂಪದಲ್ಲಿ ಭಕ್ತರು ಶಿವನನ್ನು ಆರಾಧಿಸುತ್ತಿದ್ದು, ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ಬಳಿ ಶಿವಭಕ್ತರು ಶಿವರಾತ್ರಿ ಆಚರಣೆಯಲ್ಲಿ ತೊಡಗಿದ್ದಾರೆ.
ಮಠದ ಆವರಣದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ಮೇಲೆ ಶಿವಲಿಂಗದ ಸ್ವರೂಪದಲ್ಲಿ ಅಲಂಕಾರ ಮಾಡಲಾಗಿದ್ದು, ಸೇಬು, ಸಪೋಟ, ಬಾಳೆಹಣ್ಣು, ದ್ರಾಕ್ಷಿ ಕಿತ್ತಳೆ ಹಣ್ಣು, ದಾಳಿಂಬೆ , ಅನನಾಸ್ ಸೇರಿದಂತೆ ಹತ್ತಕ್ಕೂ ಹೆಚ್ಚು ಹಣವನ್ನು ಬಳಸಿ ಶಿವಲಿಂಗದ ಆಕೃತಿಯನ್ನು ರಚಿಸಲಾಗಿದೆ. ಅಲ್ಲದೆ ವಿವಿಧ ಹೂವುಗಳನ್ನು ಬಳಸಿ ಗದ್ದುಗೆ ಮೇಲೆ ಶಿವಲಿಂಗದ ಆಕೃತಿಯನ್ನು ಸಿಂಗರಿಸಲಾಗಿದೆ. ಇಂದು ಬೆಳಗ್ಗೆಯಿಂದಲೂ ಸಾವಿರಾರು ಭಕ್ತರು ಸಿದ್ದಗಂಗಾ ಮಠಕ್ಕೆ ಆಗಮಿಸಿ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು.
ದಶಕಗಳ ಕಾಲ ಶಿವರಾತ್ರಿ ಹಬ್ಬದಂದು ಭಕ್ತರಿಗೆ ದರ್ಶನ ನೀಡಿ ಆಶೀರ್ವಾದ ನೀಡುತ್ತಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಮಠದಲ್ಲಿ ಇಲ್ಲದಿರುವುದು ಭಕ್ತರಿಗೆ ಒಂದು ರೀತಿ ನಿರಾಸೆ ಮೂಡಿದೆ. ಇನ್ನೊಂದೆಡೆ ಸ್ವಾಮೀಜಿ ಕುಳಿತು ಆಶೀರ್ವಾದ ನೀಡುತ್ತಿದ್ದ ಪೀಠಕ್ಕೆ ಜನರು ನಮಿಸಿ ತೆರಳುತ್ತಿದ್ದರು.
ಶಿವ ಭಕ್ತರಿಗೆ ವಿತರಿಸಲು ರೆಡಿಯಾಗಿದೆ 20 ಸಾವಿರ ತಂಬಿಟ್ಟು:
ಸಿದ್ದಗಂಗಾ ಮಠಕ್ಕೆ ಶಿವರಾತ್ರಿ ದಿನವಾದ ಇಂದು ಸಾವಿರಾರು ಶಿವ ಭಕ್ತರು ಆಗಮಿಸುತ್ತಿದ್ದಾರೆ. ಪ್ರಮುಖವಾಗಿ ಸಿಹಿ ಖಾದ್ಯವಾಗಿ ಬಳಸಲ್ಪಡುವ ತಂಬಿಟ್ಟು ಉಂಡೆಗಳನ್ನು ಭಕ್ತರಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 20 ಸಾವಿರಕ್ಕೂ ಹೆಚ್ಚು ಉಂಡೆಗಳನ್ನು ತಯಾರಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಬರುವ ಭಕ್ತರಿಗೆ ವಿತರಿಸಲಾಗುವುದು.ಸುಮಾರು 15 ಕ್ವಿಂಟಲ್ ಬೆಲ್ಲ , 15 ಕ್ವಿಂಟಲ್ ಅಕ್ಕಿ , ಮೂರು ಕ್ವಿಂಟಾಲ್ ಕಡ್ಲೇಬೀಜ,ಎಳ್ಳು ಸೇರಿದಂತೆ 10 ಕೆಜಿ ಏಲಕ್ಕಿಯನ್ನು ಬಳಸಿ ತಂಬಿಟ್ಟು ಉಂಡೆಗಳನ್ನು ತಯಾರು ಮಾಡಲಾಗಿದೆ.