ತುಮಕೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ಈ ಹಿಂದೆ ನನ್ನ ಅಳಿಯನ ಮೂಲಕ ಬಿಜೆಪಿ ಸೇರ್ಪಡೆಗೊಳ್ಳುವಂತೆ ಒತ್ತಡ ಹೇರಿದ್ದರು ಎಂದು ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ.
ಗುಬ್ಬಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಆಹ್ವಾನಿಸಿದ ಸಂದರ್ಭದಲ್ಲಿ ನಾನು ಜೆಡಿಎಸ್ ಬಿಟ್ಟು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಜನ ನನ್ನ ಮೇಲೆ ಅಪಾರ ನಂಬಿಕೆ ಇರಿಸಿದ್ದಾರೆ. ನಾನು ಅವರಿಗೆ ಮೋಸ ಮಾಡಲು ಇಷ್ಟಪಡುವುದಿಲ್ಲ ಎಂದು ತಿರಸ್ಕರಿಸಿದೆ ಎಂದರು.
ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ಶಾಸಕನಾಗಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದೆ. ಹೀಗಾಗಿ ನಾನು ಜೆಡಿಎಸ್ ಮುಖಂಡರ ವಿರುದ್ಧ ಏಕೆ ಬೇಸರ ಪಟ್ಟುಕೊಳ್ಳಬೇಕು?. ನನ್ನಿಂದ ಅವರಿಗೆ ಅನುಕೂಲವಾಗಿದೆ. ಅವರಿಂದ ನನಗೂ ಕೂಡ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದರು.
ಯಡಿಯೂರಪ್ಪನವರೇ ನನ್ನನ್ನು ಕರೆದು ಬಿಜೆಪಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆಯೇ ಹೊರತು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಅಕಾಸ್ಮಾತ್ ಬಂದರೆ ಹಣ ಲೂಟಿ ಮಾಡಿಕೊಂಡು ಬೇರೆ ಪಕ್ಷಕ್ಕೆ ಹೋದ ಎಂದು ಕ್ಷೇತ್ರದ ಮತದಾರರು ಹೀಯಾಳಿಸುತ್ತಾರೆ ಎಂದು ಹೇಳಿದ್ದೆ ಎಂದರು. ವಿಶೇಷ ಸಂದರ್ಭದಲ್ಲಿ ನಾನು ದೇವೇಗೌಡರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ನನ್ನ ಜೊತೆ ವಿಶ್ವಾಸದಿಂದ ಇದ್ದಾರೆ ಎಂದು ತಿಳಿಸಿದರು.