ತುಮಕೂರು: ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದನ್ನು ಮಟ್ಟಹಾಕಲು ಯುವ ಜನತೆಯಿಂದ ಮಾತ್ರ ಸಾಧ್ಯ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ್ ತಿಳಿಸಿದರು.
ಮಾತೃಭೂಮಿ ಯುವಕ ಸಂಘದ 24 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಮಾತೃಭೂಮಿ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ರಾಜ್ಯಮಟ್ಟದ ಪ್ರಥಮ ಯುವ ಜನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಸಮುದಾಯದ ಪ್ರಚಂಡ ಶಕ್ತಿ ರಾಷ್ಟ್ರ ನಿರ್ಮಾಣಕ್ಕೆ ವಿನಿಯೋಗವಾಗಬೇಕಿದೆ. ಭ್ರಷ್ಟಾಚಾರದ ಆಕರ್ಷಣೆಯನ್ನು ಮೀರುವಲ್ಲಿ ಯುವ ಸಮುದಾಯ ಸಶಕ್ತರಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾನಿಲಯದ ವಿದ್ವಾಂಸ ಡಾ. ಬಸವರಾಜ್, ಜನರ ಮನಸ್ಸನ್ನು ಉತ್ತಮ ಹಾದಿಗೆ ತರುವ ಕಡೆ ಸಂಘಟನೆಗಳು ಕಾರ್ಯನಿರ್ವಹಿಸಬೇಕು ಎಂದರು. ತಿಂದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ. ಅವಗುಣಗಳನ್ನು ಕಳೆದು ಶಿವ ಗುಣಗಳನ್ನು ಬೆಳೆಸಬೇಕಿದೆ. ಲೋಕಾನುಭವಕ್ಕಿಂತ ದೊಡ್ಡ ಅನುಭವವಿಲ್ಲ. ಆತ್ಮಾವಲೋಕನದಿಂದ ಉತ್ತಮ ಸಮಾಜ ಕಟ್ಟುವ ಕಡೆಗೆ ಯುವಪಡೆ ಸಾಗಬೇಕಿದೆ ಎಂದರು.
ಇದೇ ವೇಳೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಸಲ್ಲಿಸಿದ 24 ಸಾಧಕರಿಗೆ 'ಮಾತೃಭೂಮಿ ರಾಜ್ಯ ಪ್ರಶಸ್ತಿ' ಪ್ರಧಾನ ಮಾಡಲಾಯಿತು.