ತುಮಕೂರು: ಸಿದ್ದಗಂಗಾ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಾನುವಾರು ಜಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವಾಗಿ ಜಾತ್ರೆಯಲ್ಲಿ ಮಾರಾಟಕ್ಕಿಟ್ಟಿರುವ ಲಕ್ಷಾಂತರ ರೂ. ಮೌಲ್ಯದ ರಾಸುಗಳು ಈ ಜಾತ್ರೆಗೆ ಮತ್ತಷ್ಟು ಮೆರುಗು ನೀಡುತ್ತಿದೆ. ಜಾತ್ರೆಯಲ್ಲಿ ರಾಸುಗಳು 1 ಲಕ್ಷದಿಂದ 10 ಲಕ್ಷ ರೂ.ವರೆಗೂ ಬಿಕರಿಯಾಗುತ್ತಿರೋದು ವಿಶೇಷ.
ಜಾತ್ರೆಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿರುವ ರಾಮ-ಲಕ್ಷ್ಮಣ ಹೆಸರಿನ ಜೋಡೆತ್ತುಗಳನ್ನು 10 ಲಕ್ಷ ರೂ. ಗಳಿಗೆ ಮಾರಾಟಕ್ಕೆ ಇರಿಸಲಾಗಿದೆ. ಜಾತ್ರೆಗೆ ರೈತಾಪಿ ವರ್ಗದವರು ಹಾಗೂ ಸಾರ್ವಜನಿಕರು ಈ ರಾಮ ಲಕ್ಷ್ಮಣ ರಾಸುಗಳನ್ನು ವೀಕ್ಷಿಸಲು ಬರುತ್ತಿದ್ದಾರೆ.
ರಾಮನಗರ ಜಿಲ್ಲೆಯ ಇರಕಸಂದ್ರ ಗ್ರಾಮದ ಹೊನ್ನಗಂಗಯ್ಯ ಎಂಬ ರೈತರೋರ್ವರು ಈ ಜೋಡಿ ರಾಸುಗಳನ್ನು ಜಾತ್ರೆಗೆ ತಂದಿದ್ದಾರೆ. ಸುಮಾರು ನಾಲ್ಕು ವರ್ಷ ವಯಸ್ಸಿನ ಈ ರಾಸುಗಳನ್ನು ಜಾತ್ರೆಯಲ್ಲಿ 10 ಲಕ್ಷ ರೂ. ಗಳಿಗೆ ಮಾರಾಟಕ್ಕೆ ಇರಿಸಿದ್ದಾರೆ.
ಇದನ್ನೂ ಓದಿ: ಜನರಿಂದ ದಾನ ಸ್ವೀಕರಿಸಿ ಜಾತ್ರೆಗೆ ಆಹ್ವಾನಿಸಿದ ಸಿದ್ದಗಂಗಾ ಶ್ರೀಗಳು
ಕಳೆದ ವರ್ಷ ಮತ್ತೊಂದು ಜಾತ್ರೆಯಲ್ಲಿ 8 ಲಕ್ಷ ರೂ.ಗಳಿಗೆ ಖರೀದಿಸಿ ತಂದಿದ್ದ ಈ ರಾಸುಗಳನ್ನು ಹೊನ್ನಗಂಗಯ್ಯ ಅವರು ಉತ್ತಮವಾಗಿ ಪೋಷಣೆ ಮಾಡಿದ್ದಾರೆ. ಹೀಗಾಗಿ ಅವುಗಳ ಮೌಲ್ಯವನ್ನು 10 ಲಕ್ಷ ರೂ. ಗಳಿಗೆ ಏರಿಸಿದ್ದಾರೆ. ಅಲ್ಲದೇ 10 ಲಕ್ಷ ರೂ.ಗೂ ಕಡಿಮೆ ದರದಲ್ಲಿ ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.