ತುಮಕೂರು: ಧರ್ಮದ ಆಚರಣೆಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಯಾವ ಧರ್ಮವೂ ದ್ವೇಷ, ಹಿಂಸೆಯನ್ನು ಪ್ರೇರೇಪಿಸುವುದಿಲ್ಲ. ಜಾತಿ, ಮತ, ಧರ್ಮ ಇವುಗಳನ್ನು ಅರಿತುಕೊಂಡು ಪ್ರತಿಯೊಬ್ಬರೂ ಮನುಷ್ಯರಾಗಿ ಬಾಳಬೇಕು ಎಂದು ಸಿದ್ದಗಂಗಾ ಮಠದ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಜಾನ್ ಈದ್ ಸೌಹಾರ್ದ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದಲ್ಲಿ ಹೆಚ್ಚಾಗಿ ಸ್ವಾವಲಂಬಿ ಜೀವನ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಧರ್ಮದ ಆಚರಣೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯನಾಗಿ ಬದುಕುವುದೇ ಕಷ್ಟಕರವಾಗಿದೆ. ಪ್ರತಿಯೊಬ್ಬರಲ್ಲಿಯೂ ಪ್ರೀತಿಯನ್ನು ಹಂಚಿ ಬದುಕುವಂತಹ ಕಾರ್ಯ ಆಗಬೇಕು ಎಂದರು.